ಮೈಸೂರು
ಭಾರತಕ್ಕೆ ವಿದೇಶಿ ಬಂಡವಾಳ ಹೂಡಿಕೆಯೇ(ಎಫ್‌ಪಿಐ) ಅಗತ್ಯ ಇರಲಿಲ್ಲ. ಆದರೆ ಇದನ್ನು ಹೇರಲಾಗಿದೆ ಎಂದು ಅರ್ಥಶಾಸ್ತ್ರಜ್ಞ ಪ್ರೊ.ಬಿ.ಎಂ.ಕುಮಾರಸ್ವಾಮಿ ಪ್ರತಿಪಾದಿಸಿದರು.
ಸ್ವದೇಶಿ ಜಾಗರಣ ಮಂಚ್ ವತಿಯಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ‘ಭಾರತಕ್ಕೆ ವಿದೇಶಿ ಬಂಡವಾಳ ಭ್ರಮೆ ಮತ್ತು ವಾಸ್ತವ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಫ್‌ಪಿಐ ಭಾರತಕ್ಕೆ ಬೇಕಾಗಿರಲಿಲ್ಲ. ವಿಶ್ವಸಂಸ್ಥೆ, ವಿಶ್ವ ಹಣಕಾಸು ಸಂಸ್ಥೆ, ಅಮೆರಿಕದಂತಹ ಪಾಶ್ಚಿಮಾತ್ಯ ದೇಶಗಳು ನಮ್ಮ ದೇಶದ ಮೇಲೆ ಹೇರಿವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಜನಸಂಖ್ಯೆ ಕಡಿಮೆ.
ಆದರೆ ಬಂಡವಾಳ ಮತ್ತು ಉತ್ಪಾದನೆ ಹೆಚ್ಚು. ಹೀಗಾಗಿ, ಇವುಗಳು ಉತ್ಪಾದನೆ ಮಾಡಿದ ವಸ್ತುಗಳ ಮಾರಾಟಕ್ಕೆ ಮಾರುಕಟ್ಟೆ ಬೇಕಿತ್ತು. ಅದಕ್ಕಾಗಿ ಭಾರತ, ಚೀನಾದಂತಹ ಹೆಚ್ಚು ಜನಸಂಖ್ಯೆ ಇರುವ ದೇಶಗಳು ಬೇಕಿತ್ತು. ಹೀಗಾಗಿ, ಮುಕ್ತ ಮಾರುಕಟ್ಟೆ, ಮುಕ್ತ ವ್ಯಾಪಾರ ನೀತಿಯ ಮೂಲಕ ಎಫ್‌ಪಿಐ ಜಾಣತನದಿಂದ ಜಾರಿ ಮಾಡಲಾಯಿತು ಎಂದು ಹೇಳಿದರು.
ಪಾಶ್ಚಿಮಾತ್ಯ ದೇಶಗಳ ಅನುಕೂಲಕ್ಕಾಗಿ ಮುಕ್ತ ಮಾರುಕಟ್ಟೆ ಬೇಕು. ಅವರಿಗೆ ಅನನಕೂಲವಾದರೆ ಇದು ಬೇಡ ಎನ್ನುವಂತಾಗಿದೆ. ಹೀಗಾಗಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 180 ದೇಶಗಳ ಆಮದು ವಸ್ತುಗಳ ಮೇಲೆ ಸುಂಕ ಹೆಚ್ಚಿಸಿದ್ದಾರೆ. ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಚೀನಾದಿಂದ ಅಮೆರಿಕಾ ರಫ್ತು ಮಾಡುವ ವಸ್ತುಗಳ ಮೇಲೆ ಶೇ.134ರಷ್ಟು ತೆರಿಗೆ ಹಾಕಲಾಗಿದೆ. ಇದು ಅಮೆರಿಕಾ ಸೇರಿದಂತೆ ಪಾಶ್ಚಿಮಾತ್ಯ ದೇಶಗಳ ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದು ಹೇಳಿದರು.
ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಎಫ್‌ಪಿಐಗೆ ಹೆಚ್ಚಿನ ಒತ್ತು ನೀಡಿತ್ತು. 2014ರ ಬಳಿಕ ಬಂದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಅದನ್ನೇ ಅನುಸರಿಸಿತು. ಕಳೆದ 24 ವರ್ಷದಲ್ಲಿ ಒಂದು ಟ್ರಿಲಿಯನ್ ಡಾಲರ್(ಅಂದಾಜು ಒಂದು ಲಕ್ಷ ಕೋಟಿ ರೂ.) ವಿದೇಶಿ ಬಂಡವಾಳ ಭಾರತಕ್ಕೆ ಹರಿದು ಬಂದಿದೆ. ಇದರಲ್ಲಿ ಶೇ.69ರಷ್ಟು ಎಫ್‌ಪಿಐ ಕಳೆದ 10 ವರ್ಷದಲ್ಲಿ ದೇಶದಲ್ಲಿ ಹೂಡಿಕೆಯಾಗಿದೆ ಎಂದರು.
ಎಫ್‌ಪಿಐ ಸೂಕ್ತ ವಾತಾವರಣ ಇರುವ ದೇಶಗಳ ಸೂಚ್ಯಂಕದಲ್ಲಿ ಭಾರತವು 2014ರಲ್ಲಿ 142 ಸ್ಥಾನದಲ್ಲಿ ಇತ್ತು. 2020ರ ಹೊತ್ತಿಗೆ ಅದು 63 ಸ್ಥಾನಕ್ಕೆ ಏರಿಕೆಯಾಗಿದೆ. ವಿದೇಶಿ ಬಂಡವಾಳ ಆಕರ್ಷಿಸಲು ಹೆಚ್ಚಿನ ಆದ್ಯತೆಯೊಂದಿಗೆ ಸೌಲಭ್ಯವನ್ನು ಕಲ್ಪಿಸಿಕೊಡುವ ಮೂಲಕ ಅನುಕೂಲ ಕಲ್ಪಿಸಿಕೊಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮೋದಿ ಜಾರಿಗೆ ತಂದ ಮೇಕ್ ಇನ್ ಇಂಡಿಯಾ ಯೋಜನೆಯು ವಿದೇಶಿ ಬಂಡಾವಾಳ ಹೂಡಿಕೆಯ ಮತ್ತೊಂದು ರೂಪವಾಗಿದೆ. ಇದೀಗ ತೋಟಗಾರಿಕೆ, ಜೇನು ಸಾಕಾಣಿಕೆ, ಹೂ, ತರಕಾರಿ, ಅಣಬೆ, ಪಶು ಸಂಗೋಪನೆ, ಮೀನುಗಾರಿಕೆಯಂತಹ ಕ್ಷೇತ್ರಗಳಿಗೂ ಎಫ್‌ಪಿಐ ಕಾಲಿಟ್ಟಿದೆ. ಇದು ದೇಶಕ್ಕೆ ಮಾರಕವಾಗಲಿದೆ ಎಂದು ಎಚ್ಚರಿಸಿದರು.
ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಅಧ್ಯಕ್ಷ ಕೆ.ಬಿ.ಲಿಂಗರಾಜು, ಐಸಿಎಐ ಅಧ್ಯಕ್ಷ ಸಿ.ಎ.ಎಸ್.ಭಾರ್ಗವ್, ಸ್ವದೇಶಿ ಜಾಗರಣ ಮಂಚ್ ಮಹಿಳಾ ಪ್ರಮುಖರಾದ ರಶ್ಮಿ ವಿಜಯಕುಮಾರ್ ಇದ್ದರು