ಚಿತ್ರದುರ್ಗ: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಉಗ್ರರ ಜೊತೆ ಸೆಣಸಿ, ಹುತಾತ್ಮರಾದ ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರ ರಾಷ್ಟ್ರಸೇವೆಯನ್ನು ಕೋಟೆನಗರಿಯ ಕೆಲವೆಡೆ ಶನಿವಾರ ಸ್ಮರಿಸಲಾಯಿತು. ಒಂದು ನಿಮಿಷ ಮೌನ ಆಚರಿಸಿ, ಗೌರವಿಸಲಾಯಿತು.
ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಎನ್‌ಸಿಸಿ ಘಟಕದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಾಂಜಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಡಾ.ಸ.ರಾ.ಲೇಪಾಕ್ಷ ಮಾತನಾಡಿ, ರಾಷ್ಟ್ರಕ್ಕಾಗಿ ಪ್ರಾಣವನ್ನೂ ಲೆಕ್ಕಿಸದೆ, ಅಭಿಮಾನದಿಂದ ಸೇವೆ ಸಲ್ಲಿಸುವ ಸಲುವಾಗಿ ಸೇನೆ ಸೇರಿ ವೀರ ಮರಣವನ್ನಪ್ಪಿದ ಪ್ರಾಂಜಲ್ ನಮ್ಮ ನಾಡಿನವರು ಎಂಬುದೇ ಅತ್ಯಂತ ಹೆಮ್ಮೆಯ ವಿಚಾರ ಎಂದರು.
ಕುಟುಂಬದಲ್ಲಿ ನಾಲ್ಕೈದು ಮಕ್ಕಳಿದ್ದರೂ ಸೈನ್ಯಕ್ಕೆ ಸೇರಿಸಲು ಹಿಂಜರಿಕೆ ಹಲವರಲ್ಲಿದೆ. ಅಲ್ಲದೆ, ಸೇನೆಗೆ ಹೋಗುವುದು ಹೊಟ್ಟೆಪಾಡಿಗಾಗಿ, ಉದ್ಯೋಗಕ್ಕಾಗಿ ಎಂಬ ಮಾತು ಕೇಳಿಬರುತ್ತಲೇ ಇವೆ. ಆದರೆ, ಪ್ರಾಂಜಲ್ ಪಾಲಕರು ಉನ್ನತ ಹುದ್ದೆಯಲ್ಲಿದ್ದರೂ ಕಳುಹಿಸಿದ್ದು, ಮಾದರಿಯಾಗಿದ್ದಾರೆ ಎಂದು ಹೇಳಿದರು.
ಪ್ರಾಂಜಲ್ ಚಿಕ್ಕ ವಯಸ್ಸಿನಲ್ಲೇ ಸೇನಾಧಿಕಾರಿಯಾಗಿ ಮುಂದಾಳತ್ವ ವಹಿಸಿದ ವೀರ ಕನ್ನಡಿಗ. ರಾಷ್ಟ್ರಾಭಿಮಾನ ಎಲ್ಲರಲ್ಲೂ ಮೂಡಬೇಕು. ಅದಕ್ಕಾಗಿ ಪಾಲಕರು ತಮ್ಮ ಮಕ್ಕಳಲ್ಲಿ ದೇಶಪ್ರೇಮದ ಕುರಿತು ಚಿಂತನೆ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಭಾರ ಪ್ರಾಚಾರ್ಯ ಪ್ರೊ.ಎಲ್.ನಾಗರಾಜಪ್ಪ ಮಾತನಾಡಿ, ಯಾವುದೇ ಸಂದರ್ಭ ಎದುರಾದರೂ ದೇಶ, ನಾಡಿನ ರಕ್ಷಣೆಗೆ ನಮ್ಮ ಜೀವನ ಮುಡಿಪಾಗಿಡಬೇಕು. ಹುತಾತ್ಮ ಕ್ಯಾಪ್ಟನ್ ಪ್ರಾಂಜಲ್ ಅವರಂತೆ ಧೈರ್ಯ ಮೆರೆಯಬೇಕು ಎಂದು ಹೇಳಿದರು.
ವಕೀಲ ಓ.ಪ್ರತಾಪ್‌ಜೋಗಿ ಮಾತನಾಡಿ, ಸಾವಿರಾರು ಯುವಕರು ಸೇನೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವುದು ದೇಶ ಹೆಮ್ಮೆ ಪಡುವ ವಿಷಯ. ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸೈನ್ಯಕ್ಕೆ ಸೇರಿ ದೇಶ ಸೇವೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಪ್ರಾಧ್ಯಾಪಕರಾದ ಡಾ.ತಾರಿಣಿ ಶುಭದಾಯಿನಿ, ಡಾ.ಪಿ.ಎಸ್.ಗಂಗಾಧರ್, ಐಕ್ಯುಎಸಿ ಸಂಚಾಲಕ ಪ್ರೊ.ಜಿ.ಡಿ.ಸುರೇಶ್, ಪ್ರೊ.ಆರ್.ಗಂಗಾಧರ್, ಪ್ರೊ.ಕೆ.ಎಲ್.ಶ್ರೀನಿವಾಸ್, ಪ್ರೊ.ನಯಾಜ್, ವೆಂಕಟೇಶ್, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಇದ್ದರು.