ನಿಪ್ಪಾಣಿ: ಸಾಮಾಜಿಕ ಜಾಲತಾಣದಿಂದ ಹೊರಬಂದು ವಿದ್ಯಾರ್ಥಿಗಳು ಈಗಿನಿಂದಲೇ ದೇಶಕ್ಕಾಗಿ ಕೊಡುಗೆ ನೀಡುವ ಕುರಿತು ಚಿಂತನ ನಡೆಸಿದಲ್ಲಿ ನಾಳಿನ ಉತ್ತಮ ಪ್ರಜೆಗಳಾಗುತ್ತೀರಿ. ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ದೇಶಕ್ಕೆ ಏನಾದರೂ ಕೊಡುಗೆ ನೀಡಲು ಪ್ರಯತ್ನಿಸಬೇಕು ಎಂದು ವೈದ್ಯ ಡಾ.ಅರುಣ ಪಾಟೀಲ ಹೇಳಿದರು.
ಪಟ್ಟಣದ ವಿದ್ಯಾ ಸಂವರ್ಧಕ ಮಂಡಳದ ಶೈಕ್ಷಣಿಕ ಅಂಗಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ೭೯ನೇ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು. ಸ್ವಚ್ಛತೆಗೆ ಆದ್ಯತೆ ಕೊಡುತ್ತ ಎಲ್ಲರೂ ಒಗ್ಗಟ್ಟಿನಿಂದ ಇರುವುದನ್ನು ರೂಢಿಸಿಕೊಳ್ಳಬೇಕು ಎಂದರು.
ವಿಎಸ್‌ಎಂ ಗ್ರುಪ್ ಆಫ್ ಇನ್ಸ್ಟಿಟ್ಯೂಷನ್ಸ್ ಸಿಇಒ ಡಾ.ಸಿದ್ದಗೌಡ ಪಾಟೀಲ ಮಾತನಾಡಿದರು. ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಅಂಗಸಂಸ್ಥೆಗಳ ಎನ್‌ಸಿಸಿ, ಎನ್‌ಎಸ್‌ಎಸ್, ಭಾರತ ಸೇವಾ ದಳ, ಸ್ಕೌಟ್ಸ್ ಮತ್ತು ಗೈಡ್ಸ್, ಮೊದಲಾದ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿದರು.
ಮಂಡಳದ ಕಾರ್ಯದರ್ಶಿ ಸಮೀರ ಬಾಗೇವಾಡಿ, ಸಂಚಾಲಕ ಹರಿಶ್ಚಂದ್ರ ಶಾಂಡಗೆ, ಸಂಜಯ ಮೊಳವಾಡೆ, ರುದ್ರಕುಮಾರ ಕೋಠಿವಾಲೆ, ಪ್ರಾಚಾರ್ಯರಾದ ಚಿದಂಬರ ಜೋಶಿ, ಡಾ.ನಿಂಗಪ್ಪ ಮಾದಣ್ಣವರ, ಲಿಲಿಯನ್ ಶಾನ್, ಪ್ರಕಾಶ ಐನಾಪುರೆ, ಗಜಾನನ ಕಮತೆ, ಯಲ್ಲಪ್ಪ ಹಂಡಿ, ಜ್ಞಾನದೇವ ನಾಯಿಕ ಇತರರು ಇದ್ದರು.