ಜಿಲ್ಲೆ

ದೇಶ ವಿಭಜನೆ ವಿರೋಧಿಸಿದ್ದ ಪ್ರೊ.ಬಿ.ಶೇಕ್ ಆಲಿ ಹಯಾತ್ ಔರ್ ಕಿದಾಮತ್

ಮೈಸೂರು: ಸ್ವಾತಂತ್ರೃ ಬಳಿಕ ದೇಶ ವಿಭಜನೆಯನ್ನು ಹಿಂದುಗಳ ಜತೆಗೆ ಹಲವು ಮುಸ್ಲಿಮರು ವಿರೋಧಿಸಿದರು. ಅದರಂತೆ ಪ್ರೊ.ಬಿ.ಶೇಕ್ ಆಲಿ ಹಯಾತ್ ಔರ್ ಕಿದಾಮತ್ ಅವರು ಕೂಡಾ ತೀವ್ರವಾಗಿ ವಿರೋಧಿಸಿದ್ದರು ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ.ಮಹಿರ್ ಮಾನ್ಸೂರು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪ್ರೊ.ಬಿ.ಶೇಕ್ ಆಲಿ ಹಯಾತ್ ಔರ್ ಕಿದಾಮತ್ ಅವರ ಬದುಕು ಮತ್ತು ದೃಷ್ಟಿಕೋನ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಬ್ರಿಟಿಷರ ಆಡಳಿತ ಮುಕ್ತಾಯಗೊಂಡ ಬಳಿಕ ದೇಶವನ್ನು ಭಾರತ, ಪಾಕಿಸ್ತಾನವಾಗಿ ವಿಭಜನೆ ಮಾಡಬಾರದು ಎಂದು ಮೌಲಾನ ಅಬ್ದುಲ್ ಕಲಾಂ ಅಜಾದ್, ಮಿರ್ಜಾ ಇಸ್ಮಾಯಿಲ್ ಅವರಿಗೆ ತಮ್ಮ ನಿಲುವು ವ್ಯಕ್ತಪಡಿಸಿದ್ದರು. ದೇಶ ವಿಭಜನೆ ಆಗಬಾರದು ಎಂದು ಅನೇಕ ಹಿಂದು, ಮುಸ್ಲಿಮರು ಸಹ ವಿರೋಧ ವ್ಯಕ್ತಪಡಿಸಿದ್ದರು ಎಂದು ಹೇಳಿದರು.
ಶೇಕ್ ಆಲಿ ಅಪರೂಪದ ಬಹುಮುಖ ಪ್ರತಿಭೆ. ಅವರೊಬ್ಬ ಉತ್ತಮ ಇತಿಹಾಸ ತಜ್ಞ ಆಗಿದ್ದಾರೆ. ಅವರು ರಚಿಸಿರುವ 55 ಕೃತಿಗಳು ಬಹಳ ಅಪರೂಪವಾದ ಮಾಹಿತಿ ಒಳಗೊಂಡಿವೆ. ಉರ್ದು, ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಅಪಾರ ಪರಿಣತಿ ಹೊಂದಿದ್ದರು ಎಂದು ಬಣ್ಣಿಸಿದರು.
ಇತಿಹಾಸದ ಬಗ್ಗೆ ಶೇಕ್ ಆಲಿ ಅವರಿಗೆ ಇರುವ ಅಪಾರ ಪರಿಣತಿ ಗಮನಿಸಿ ಬ್ರಿಟಿಷ್ ಸರ್ಕಾರವೇ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಆಡಳಿತ, ಕೊಡುಗೆಗೆ ಸಂಬಂಧಿಸಿದಂತೆ ಬರವಣಿಗೆಗೆ ಪ್ರೋತ್ಸಾಹ ನೀಡಿತ್ತು. ಅದರಂತೆ ಹೈದರಾಲಿ, ಟಿಪ್ಪು ಸುಲ್ತಾನ್ ಮತ್ತು ಮೈಸೂರು ಬ್ರಿಟಿಷ್ ಸಾಮ್ರಾಜ್ಯ ಎಂಬ ಪುಸ್ತಕ ರಚಿಸಿದರು. ಅಲ್ಲದೇ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ಹಲವಾರು ಶಾಲೆ ತೆರೆದರು. ಶಿಕ್ಷಣ ಕ್ಷೇತ್ರದಲ್ಲಿ ಶೇಕ್ ಆಲಿ ಕೊಡುಗೆ ಅವಿಸ್ಮರಣೀಯ ಎಂದರು.
ಮೈಸೂರು ಸಂಸ್ಥಾನದಲ್ಲಿ ಬ್ರಿಟಿಷರ ಆಡಳಿತ ಕೃತಿಯೂ ಅಂದಿನ ಮೈಸೂರು ಸಂಸ್ಥಾನದಲ್ಲಿ ಆದ ಹಲವಾರು ಮಹತ್ತರ ಬದಲಾವಣೆಗಳ ಬಗ್ಗೆ ದಾಖಲಾತಿ ಒದಗಿಸುತ್ತವೆ. ಮಹಾರಾಜರು ಇವರ ಜ್ಞಾನ ಮತ್ತು ಸರಳತೆ ಕಂಡು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಂದೇ ಲಂಡನ್ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್ ಪಡೆದು ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿಯೂ ಪಿಎಚ್.ಡಿ ಪದವಿ ಪಡೆದಿದ್ದರು ಎಂದು ಹೇಳಿದರು.
ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಡಾ.ಖಾದರ್ ಪಾಷ ಮಾತನಾಡಿ, ಶೇಕ್ ಆಲಿ ಅವರು ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸಿ ಮೈಸೂರಿನ ಗೌಶಿಯಾನಗರ ಹಾಗೂ ಇತರ 8 ಕಡೆಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಯದ ಉರ್ದು ವಿಭಾಗದಲ್ಲಿ ಅವರು ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.
ವಿಶ್ವವಿದ್ಯಾನಿಲಯದ ಶೈಕ್ಷಣಿಕ ಡೀನ್ ಪ್ರೊ.ಎನ್.ಲಕ್ಷ್ಮೀ ಮಾತನಾಡಿ, ಶೇಕ್ ಆಲಿ ದೇಶದ ಒಬ್ಬ ಅತ್ಯುತ್ತಮ ಶಿಕ್ಷಣ ತಜ್ಞ. ಅವರದು ಎಲ್ಲರನ್ನೂ ಒಳಗೊಳ್ಳುವ ಜಾತ್ಯತೀತ ವ್ಯಕ್ತಿತ್ವ. ಅವರ ವಿಚಾರಗಳ ಕುರಿತು ಒಂದು ದಿನ ವಿಶ್ಲೇಷಣೆ ಮಾಡಲು ಅಸಾಧ್ಯ. ಹಿಂದಿ, ಉರ್ದು, ಇಂಗ್ಲಿಷ್ ಭಾಷೆಗಳಲ್ಲಿ ಅಪಾರ ಪರಿಣತಿ ಹೊಂದಿದ್ದ ಸರಳ ಸಜ್ಜನಿಕೆಯ ವ್ಯಕ್ತಿ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಡಾ.ಶರಣಪ್ಪ ವಿ.ಹಲಸೆ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಕೆ.ಎನ್.ಮೂರ್ತಿ, ಉರ್ದು ವಿಭಾಗದ ಡೀನ್ ಪ್ರೊ.ಎಂ.ರಮಾನಾಥ ನಾಯ್ಡು, ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಪ್ರೊ.ಕೆ.ಬಿ.ಪ್ರವೀಣ್, ವಿಚಾರ ಸಂಕಿರಣ ಸಂಚಾಲಕರಾದ ಡಾ.ಎಂ.ಡಿ.ನರಸುಲ್ಲಾಖಾನ್, ಡಾ.ಸೈಯದ್ ಈಸ್ ರತ್ ಫಾತಿಮಾ ಇತರರು ಇದ್ದರು.