ಮಂಡ್ಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವೀರ ಸೈನಿಕರಾದ ವೆಂಕಟೇಶ್, ಅರುಣ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕೃಷಿಕ್ ಲಯನ್ಸ್ ಸಂಸ್ಥೆಯ ಆಡಳಿತಾಧಿಕಾರಿ ಕೆ.ಟಿ.ಹನುಮಂತು, ಎಂ.ಎನ್.ಶಿವಶಂಕರ್, ಜಿ.ವಿ.ನಾಗರಾಜು, ವೈ.ಎಚ್.ರತ್ನಮ್ಮ, ಲೋಕೇಶ್ ಇದ್ದರು. 
ಜಿಲ್ಲೆ

ದೇಶ ರಕ್ಷಿಸುವ ಸೈನಿಕರನ್ನು ಎಲ್ಲರೂ ಪ್ರೀತಿಸಿ

ಮಂಡ್ಯ: ದೇಶ ಕಾಯುವ ಸೈನಿಕರನ್ನು ಗೌರವಿಸಿ ಪ್ರೀತಿಸಬೇಕು ಎಂದು ಕೃಷಿಕ್ ಲಯನ್ಸ್ ಸಂಸ್ಥೆಯ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿದರು. ನಗರದ ಸೇವಾಕಿರಣ ವೃದ್ಧಾಶ್ರಮದಲ್ಲಿ ಕೃಷಿಕ್ ಲಯನ್ಸ್ ಸಂಸ್ಥೆಯ ವತಿಯಿಂದ ಶನಿವಾರ ಆಯೋಜಿಸಿದ್ದ ವೀರ ಸೈನಿಕ ದಿನಾಚರಣೆ, ಅಭಿನಂದನೆ ಹಾಗೂ ದೇಶ ಭಕ್ತಿಗೀತೆ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಮ್ಮ ಪ್ರಾಣದ ಹಂಗು ತೊರೆದು ದೇಶಕ್ಕಾಗಿ ಅವಿರತವಾಗಿ ಶ್ರಮಿಸಿ ಗಡಿ ಕಾಯುವ ವೀರ ಸೈನಿಕರನ್ನು ಅಭಿಮಾನದಿಂದ ಗೌರವಿಸಬೇಕು ಎಂದರು. ಇಂದು ದೇಶದ ಜನತೆ ನೆಮ್ಮದಿಯಾಗಿ ಸುಖ, ಶಾಂತಿಯಿಂದ ಜೀವನ ನಡೆಸುತ್ತಿದ್ದಾರೆಂದರೆ ಅದು ದೇಶದ ಗಡಿ ಕಾಯುವ ಸೈನಿಕರ ತ್ಯಾಗದ ಪ್ರತಿಫಲವೇ ಆಗಿದೆ. ಸಾವಿರಾರು ಅಡಿ ಎತ್ತರದ ಹಿಮಾಲಯದ ಗಡಿಗಳಲ್ಲಿ ದೇಶವನ್ನು ಶತ್ರುಗಳು, ಭಯೋತ್ಪಾದಕರಿಂದ ಕಾಪಾಡುವ ಅತ್ಯಂತ ಮಹತ್ವಪೂರ್ಣ ಜವಾಬ್ದಾರಿಯನ್ನು ದೇಶದ ಸೈನಿಕರು ಮಾಡುತ್ತಿದ್ದಾರೆ. ಎಲ್ಲ ಆಸೆ ಆಮಿಷಗಳನ್ನು ಬದಿಗೊತ್ತಿ ಆತ್ಮನಿಷ್ಠೆಯಿಂದ ದೇಶ ಸೇವೆ ಮಾಡುವ ನಿಜವಾದ ಸಮಾಜ ಸೇವಕರು ವೀರ ಸೈನಿಕರು ಮತ್ತು ರೈತರು ಎಂದು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾಕಿರಣ ಆಶ್ರಮದ ಕಾರ್ಯದರ್ಶಿ ಜಿ.ವಿ.ನಾಗರಾಜು ವಹಿಸಿದ್ದರು. ಜನಪರ ಸಂಘಟನೆಯ ಮುಖ್ಯಸ್ಥೆ ವೈ.ಎಚ್.ರತ್ನಮ್ಮ, ಪತ್ರಕರ್ತ ಲೋಕೇಶ್ ಉಪಸ್ಥಿತರಿದ್ದರು. ಕಲಾಶ್ರೀ ವಿದ್ಯಾಶಂಕರ್ ಅವರಿಂದ ದೇಶಭಕ್ತಿ ಗೀತೆ ಗಾಯನ ನಡೆಯಿತು.

ಸನ್ಮಾನ: ಕಾರ್ಗಿಲ್ ಸೇರಿದಂತೆ ಅನೇಕ ಯುದ್ಧಗಳಲ್ಲಿ ಭಾಗಿಯಾಗಿರುವ ಕೆ.ಆರ್.ಪೇಟೆ ತಾಲೂಕಿನ ದಡದಹಳ್ಳಿ ವೆಂಕಟೇಶ್ ಮತ್ತು ಅಸ್ಸಾಂ, ರಾಜಸ್ಥಾನ ಸೇರಿದಂತೆ ಅನೇಕ ಸೂಕ್ಷ್ಮ ಪ್ರದೇಶಗಳಲ್ಲಿ ರೈಫಲ್ಸ್ ತಂಡದಲ್ಲಿರುವ ಕೊಪ್ಪದ ಅರುಣ್‌ಕುಮಾರ್ ಹಾಗೂ ನಿವೃತ್ತ ಸೈನಿಕ ಎಂ.ಎನ್.ಶಿವಶಂಕರ್ ಅವರನ್ನು ಸನ್ಮಾನಿಸಲಾಯಿತು.