ಚಿಕ್ಕೋಡಿ: ಪಹಲ್ಗಾಮ್‌ನಲ್ಲಿ ಪಾಕ್ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಭಾರತೀಯ ರಕ್ಷಣಾ ಪಡೆಗಳು ಕೈಗೊಂಡ `ಆಪರೇಷನ್ ಸಿಂಧೂರ' ಯಶಸ್ಸು ಕಂಡಿದ್ದಲ್ಲದೇ, ಉಗ್ರರಿಗೆ ದುಸ್ವಃಪ್ನವಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ಇಲ್ಲಿನ ಆರ್‌ಡಿ ಶಾಲೆಯ ಕ್ರೀಡಾಂಗಣದಲ್ಲಿ ಸೋಮವಾರ ತಿರಂಗಾ ಯಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ರಾಷ್ಟçಧ್ವಜ ಬೃಹತ್ ಮೆರವಣಿಗೆ ನಡೆಸಿದ ಬಳಿಕ ಗಾಂಧಿ ಕಟ್ಟೆ ಬಳಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಪಾಕ್ ಉಗ್ರರು ನಡೆಸಿದ ಕೃತ್ಯಕ್ಕೆ ಭಾರತೀಯ ಸೈನಿಕರು ಆಪರೇಷನ್ ಸಿಂಧೂರ ಮೂಲಕ ಉತ್ತರ ನೀಡಿದ್ದಾರೆ. ಸೈನಿಕರ ಹಿಂದೆ ನಾವಿದ್ದೇವೆ ಎನ್ನುವ ಸಂದೇಶದೊಂದಿಗೆ ಅವರ ಮನಸ್ಟ್ರೈರ್ಯ ಹೆಚ್ಚಿಸಲು ರಾಜ್ಯಾದ್ಯಂತ ತಿರಂಗಾ ಯಾತ್ರೆ ನಡೆಸಲಾಗುತ್ತಿದೆ. ದೇಶದ ವಿಷಯ ಬಂದಾಗ ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಎಲ್ಲರೂ ಒಂದಾಗಿರುವುದು ಅವಶ್ಯಕ ಎಂದರು.
ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಅಪ್ರಚೋದಕ ದಾಳಿ ನಡೆಸಿ ಅಮಾಯಕರನ್ನು ಬಲಿ ತೆಗೆದುಕೊಂಡಿದ್ದ ಪಾಕಿಸ್ತಾನಕ್ಕೆ `ಅಪರೇಷನ್ ಸಿಂಧೂರ' ಮೂಲಕ ಸೇನೆ ಎದೆ ನಡುಗಿಸುವ ಉತ್ತರ ನೀಡಿದೆ. ಭಾರತೀಯ ಸೈನಿಕರ ಹೋರಾಟಕ್ಕೆ ಎಲ್ಲರೂ ಬೆಂಬಲಿಸೋಣ ಎಂದರು.
ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಮಾತನಾಡಿದರು. ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ, ಸದಲಗಾದ ಡಾ.ಶ್ರದ್ಧಾನಂದ ಸ್ವಾಮೀಜಿ, ಶಾಸಕರಾದ ಡಿ.ಎಂ.ಐಹೊಳೆ, ನಿಖಿಲ ಕತ್ತಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಸಂಜಯ ಕವಟಗಿಮಠ, ಸಂಜಯಗೌಡ ಪಾಟೀಲ, ಶರತಚಂದ್ರ ಕವಟಗಿಮಠ, ದುಂಡಪ್ಪ ಬೆಂಡವಾಡೆ, ಶಾಂಭವಿ ಅಶ್ವತ್ಥಪುರ, ಮಲ್ಲಿಕಾರ್ಜುನ ಕವಟಗಿಮಠ ಸೇರಿ ಮಾಜಿ ಸೈನಿಕರು,ವೈದ್ಯಕೀಯ ಸಂಘದ ಸದಸ್ಯರು, ಕೆಎಲ್‌ಇ, ಸಿಎಲ್‌ಇ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.