ಗೌರಿಬಿದನೂರು: ದೇಶದ ಸಮಗ್ರತೆ, ಏಕತೆ, ಭದ್ರತೆ ಹಾಗೂ ಅಭಿವೃದ್ಧಿಗೆ ಕಂಟಕವಾಗಿರುವ ದುಷ್ಟ ಶಕ್ತಿಗಳ ವಿರುದ್ಧ ನಾವೆಲ್ಲ ಜಾಗೃತರಾಗಬೇಕು. ದೇಶಕ್ಕಾಗಿ ನಾವಿದ್ದೇವೆ, ದೇಶ ಮೊದಲು ಎಂಬ ಭಾವ, ಜಾಗೃತಿ ಎಲ್ಲರಲ್ಲೂ ಬೆಳೆಯಬೇಕು ಎಂದು ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಜಿಲ್ಲಾಡಳಿತದಿಂದ ತಾಲೂಕಿನ ವಿದುರಾಶ್ವತ್ಥದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕೆ ಮುನ್ನ ನಮ್ಮಲ್ಲಿ ದೇಶದ ಕಲ್ಪನೆ ಹಾಗೂ ಒಗ್ಗಟ್ಟು ಇರಲಿಲ್ಲ, ಗುಲಾಮಗಿರಿ ನಡೆಯುತ್ತಿತ್ತು. ಅನೇಕರು ನಮ್ಮ ಸಂಪತ್ತನ್ನು ಲೂಟಿ ಹೊಡೆದರು. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ಪ್ರಾಣ ತ್ಯಾಗ ಮತ್ತು ಹೋರಾಟ ಮಾಡಿದ್ದಾರೆ. ಅವರ ಕೊಡುಗೆ ಸ್ಮರಿಸಬೇಕು. ನಮಗೆ ಸ್ವಾತಂತ್ರ್ಯ ಹೇಗೆ ಬಂತು ಎಂಬುದರ ಅರಿವು ಯುವಕರಿಗೆ ಗೊತ್ತಾಗಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಮಹಾಭಾರತದ ವಿದುರ ನೆಟ್ಟ ಅಶ್ವತ್ಥ ವೃಕ್ಷದಿಂದಾಗಿ ವಿದುರಾಶ್ವತ್ಥ ಎಂಬ ಹೆಸರು ಪಡೆದ ಗ್ರಾಮ ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೂ ಪುಣ್ಯಭೂಮಿ ಎಂದು ಕರೆಸಿಕೊಳ್ಳುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ 75 ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪ್ರಪಂಚವನ್ನೇ ಅಲುಗಾಡಿಸಿದ ಕರೊನಾವನ್ನು ನಮ್ಮ ದೇಶ ಯಶಸ್ವಿಯಾಗಿ ಮೆಟ್ಟಿ ನಿಂತಿದೆ. ಈ ಸಾಧನೆಯನ್ನು ಯಾರಿಂದಲೂ ಅಲ್ಲಗಳೆಯಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಸಾಧನೆಯನ್ನು ವಿಶ್ವವೇ ಕೊಂಡಾಡುತ್ತಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಿಂದ ವಿದುರಾಶ್ವತ್ಥಕ್ಕೆ ಬೈಕ್ ರ‌್ಯಾಲಿ ನಡೆಸಲಾಯಿತು. ವಿಧಾನಸಭೆ ಅಧ್ಯಕ್ಷರು ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಕ್ಕೆ ಭೇಟಿ ನೀಡಿ ಹೋರಾಟಗಾರರನ್ನು ಸ್ಮರಿಸಿದರಲ್ಲದೆ ವೀರಸೌಧದ ಚಿತ್ರಪಟ ಗ್ಯಾಲರಿ ವೀಕ್ಷಿಸಿದರು. ವಿವಿಧ ಜನಪದ ಕಲಾ ತಂಡಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು.
ಡಿಸಿ ಆರ್.ಲತಾ, ಜಿಪಂ ಸಿಇಒ ಪಿ.ಶಿವಶಂಕರ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ನಿರ್ದೇಶಕ ಡಿ.ಎಂ.ರವಿಕುಮಾರ್, ಗ್ರಾಪಂ ಅಧ್ಯಕ್ಷೆ ಕೆ.ಆರ್.ಮನುಜಾ, ತಹಸೀಲ್ದಾರ್ ಎಚ್.ಶ್ರೀನಿವಾಸ್, ತಾಪಂ ಇಒ ಹರೀಶ್, ಸೇರಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ವೀರ ಸಾವರ್ಕರ್ ಪ್ರೇರಣಾಶಕ್ತಿ: ವೀರ ಸಾವರ್ಕರ್ ಯುವಕರಲ್ಲಿ ರಾಷ್ಟ್ರಭಕ್ತಿ ಜಾಗೃತಿಗೊಳಿಸುವ ಪ್ರೇರಣಾಶಕ್ತಿ. ಅವರ ಇಡೀ ಕುಟುಂಬ ಸ್ವಾತಂತ್ರ್ಯಕ್ಕಾಗಿ ದುಡಿದಿದೆ. 10 ವರ್ಷ ಜೈಲಲ್ಲಿದ್ದರು. ಅಂಡಮಾನ್ ಜೈಲಿನಲ್ಲಿ ಕರಿ ನೀರಿನ ಶಿಕ್ಷೆ ಅನುಭವಿಸಿದರು. ಅವರು ಪಟ್ಟ ಕಷ್ಟಗಳಿಂದ ಸಿಕ್ಕ ಸ್ವಾತಂತ್ರ್ಯದಿಂದಾಗಿ ನಾವಿಂದು ಸಮೃದ್ಧ ಜೀವನ ನಡೆಸುತ್ತಿದ್ದೇವೆ. ಅವರ ದೇಶ ಸೇವೆಯನ್ನು ಎಷ್ಟು ಸ್ಮರಿಸಿದರೂ ಸಾಲದು. ಅಂತಹವರ ಬಗ್ಗೆ ಸಮಾಜದಲ್ಲಿ ಅಗೌರವವಾಗಿ ಮಾತನಾಡುವ ಜನಕ್ಕೆ ಉತ್ತರ ನೀಡಬೇಕು. ಇತಿಹಾಸದ ಸ್ಪಷ್ಟತೆ ಇರಬೇಕು. 1938ರಲ್ಲಿ ವಿದುರಾಶ್ವತ್ಥದಲ್ಲಿ ನಡೆದ ತ್ಯಾಗ ಬಲಿದಾನ ಅನೇಕರಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ನೀಡಿತು. ಇದನ್ನು ಯುವ ಪೀಳಿಗೆಗೆ ತಿಳಿದುಕೊಳ್ಳಬೇಕು ಎಂದರು.
ಜಗತ್ತಿಗೆ ಗುರುವಾಗಬೇಕು: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ 75 ವರ್ಷಗಳಲ್ಲಿ ಆಹಾರ, ವಿಜ್ಞಾನ, ಬಾಹ್ಯಾಕಾಶ, ವೈದ್ಯಕೀಯ, ಔಷಧ ಸೇರಿ ಎಲ್ಲ ಕ್ಷೇತ್ರಗಳಲ್ಲಿ ದೇಶ ಮುಂಚೂಣಿಯಲ್ಲಿದೆ. ಆಹಾರ ಔಷಧಗಳನ್ನು ಪ್ರಪಂಚಕ್ಕೆ ರಫ್ತು ಮಾಡುತ್ತಿದ್ದೇವೆ. ಕರೊನಾದಂತಹ ಸಂದರ್ಭದಲ್ಲಿ ನೂರಾರು ಕೋಟಿ ಜನಕ್ಕೆ ಉಚಿತ ಲಸಿಕೆ ನೀಡಿ ವಿಶ್ವವನ್ನೇ ನಿಬ್ಬೆರಗಾಗಿಸಿದ್ದೇವೆ. ಇತಿಹಾಸದ ಜತೆಗೆ ಈ ಸಾಧನೆಗೆ ನಾವು ಹೆಮ್ಮೆ ಪಡಬೇಕು. ದೇಶದ ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಭಯೋತ್ಪಾದನೆ, ನಕ್ಸಲ್, ಮಾವೋವಾದಿಯಂತಹ ಶಕ್ತಿಗಳ ವಿರುದ್ಧ ಜಾಗೃತರಾಗಿ ಭವಿಷ್ಯದಲ್ಲಿನ ಸವಾಲು ಸ್ವೀಕರಿಸಬೇಕು. ಜಗತ್ತಿಗೆ ಜ್ಞಾನದ ಬೆಳಕು ಕೊಟ್ಟದ ದೇಶ ನಮ್ಮದು ಎಂಬುದನ್ನು ಮರೆಯಬಾರದು. ಮುಂದೆ ಕೂಡ ಅದೇ ರೀತಿ ನಾವೆಲ್ಲಾ ಒಗ್ಗೂಡಿ ದೇಶವನ್ನು ವಿಶ್ವಗುರುವನ್ನಾಗಿಸುವತ್ತ ಕೊಂಡೊಯ್ಯಬೇಕು ಎಂದು ಸ್ಪೀಕರ್ ಹೇಳಿದರು.
ಹಿರಿ ಜೀವದ ಹಾಸ್ಯ:ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂ.ಎ.ಬ್ರಹ್ಮಯ್ಯ ಅವರನ್ನು ಸನ್ಮಾನಿಸಿದ ಕಾಗೇರಿ, ನಿಮ್ಮ ಆರೋಗ್ಯದ ಗುಟ್ಟೇನು ಎಂದು ಪ್ರಶ್ನಿಸಿದರು. ಇಂದಿಗೂ ನನ್ನ ಅಡುಗೆ ನಾನೇ ಮಾಡಿಕೊಂಡು ತಿನ್ನುತ್ತೇನೆ ಎಂದು ಬ್ರಹ್ಮಯ್ಯ ತಿಳಿಸಿದಾಗ, ನಿಮ್ಮ 100ನೇ ವರ್ಷದ ಹುಟ್ಟುಹಬ್ಬಕ್ಕೆ ನಮಗೆ ತಿಳಿಸಬೇಕು. ಎಲ್ಲರೂ ಸೇರಿ ಅದ್ದೂರಿಯಾಗಿ ಆಚರಿಸುತ್ತೇವೆ ಎಂದು ಅಧ್ಯಕ್ಷರು ಹೇಳಿದಾಗ ಅಲ್ಲಿಯವರೆಗೆ ಬದುಕಿದ್ದರೆ ಹೇಳುತ್ತೇನೆ ಎಂದು ಬ್ರಹ್ಮಯ್ಯ ಹಾಸ್ಯ ಚಟಾಕಿ ಹಾರಿಸಿದರು.