ಜಿಲ್ಲೆ

ದೇವೇಗೌಡರಿಗೆ ಶಕ್ತಿ ತುಂಬಿದ್ದು ಮಾದಿಹಳ್ಳಿ ಹೋಬಳಿ: ಕೆ.ಎಸ್.ಲಿಂಗೇಶ

ಬೇಲೂರು: ಶಾಸಕ ಕೆ.ಎಸ್.ಲಿಂಗೇಶ್ 25 ಕೋಟಿ ರೂ, ಅನುದಾನದಲ್ಲಿ ತಾಲೂಕಿನ ಹುಲುಗುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸ ಮಾಡಿಸಿರುವುದನ್ನು ಶ್ಲಾಘಿಸಿ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಬುಧವಾರ ಹುಲುಗುಂಡಿ ಗ್ರಾಮದಲ್ಲಿ ಶಾಸಕ ಕೆ.ಎಸ್.ಲಿಂಗೇಶರನ್ನು ಅಭಿನಂದಿಸಿದರು.


ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ಕೆ.ಎಸ್.ಲಿಂಗೇಶ್, ಕಳೆದ ಚುನಾವಣೆಯಲ್ಲಿ ಎಲ್ಲರೂ ನನಗೆ ಮತದಾನ ಮಾಡಿದ್ದರಿಂದ ಲೀಡ್ ಆಗಿ ಗೆದ್ದಿದ್ದೇನೆ. ನನಗೆ ಚುನಾವಣೆಯಲ್ಲಿ ಸಂಪೂರ್ಣ ಸಹಕಾರ ಕೊಟ್ಟಿದ್ದು ಮಾದೀಹಳ್ಳಿ ಹೋಬಳಿ ಕೋಗಿಲೆಮನೆ ಕ್ಷೇತ್ರದ ಮತದಾರರು. ದೇವೇಗೌಡರಿಗೆ ಶಕ್ತಿ ತುಂಬಿದ್ದು ಮಾದಿಹಳ್ಳಿ ಹೋಬಳಿ. ನಾನು ಒಬ್ಬ ಸಾಮಾನ್ಯ ರೈತನ ಮಗ. ನನ್ನನ್ನು ಆರಿಸಿ ಕಳುಹಿಸಿದ್ದಕ್ಕಾಗಿ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ. ಜಲ ಜೀವನ್ ಮಿಷನ್‌ಯ್ೋಜನೆಯಡಿ 800 ಕೋಟಿ ರೂ, ಅನುದಾನದಲ್ಲಿ ಮನೆ ಮನೆಗೆ ನೀರು ಕೊಡುವ ಯೋಜನೆಗೆ ಸಧ್ಯದಲ್ಲೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ರಣಘಟ್ಟ ಯೋಜನೆಯಲ್ಲಿ ಕುಮಾರಣ್ಣನವರ ಅವಿರತ ಶ್ರಮವಿದೆ. ಬಿಜೆಪಿಯವರು ಹೇಳುತ್ತಾರೆ. ರಣಘಟ್ಟ ಯೋಜನೆಗೆ ಹಣ ತಂದವರು ನಾವು ಎಂದು. ಆದರೆ ಆ ಅನುದಾನ ತರಬೇಕಾದರೆ ನಾನು ಎಷ್ಟು ಕಷ್ಟಪಟ್ಟಿದ್ದೇನೆ ಎಂಬುದು ನನಗೆ ಗೊತ್ತಿದೆ. ಒಬ್ಬರು ಜಿಲ್ಲಾಧ್ಯಕ್ಷರಾಗಿ ಸರ್ಕಾರದಿಂದ ಹಣ ತಂದು ಬೇಲೂರು ಕ್ಷೇತ್ರದಲ್ಲಿ ಒಂದೇ ಒಂದು ಕೆಲಸ ಮಾಡಿಸಲಿಲ್ಲ. ಅವರು ಕೇವಲ ಕ್ಯಾಲೆಂಡರ್, ಸೀರೆ, ಪಂಚೆ, ಕುಕ್ಕರ್, ಗಡಿಯಾರ ಹಂಚುವುದಕ್ಕೆ ಸೀಮಿತವಾಗಿದ್ದಾರೆ. ಇದು ಅವರ ಘನತೆಯನ್ನು ತೋರಿಸುತ್ತದೆ.

ಮತದಾರರು ಇಸಕೊಳ್ಳಿ ಯಾರಪ್ಪನ ಮನೆ ದುಡ್ಡು. ಆದರೆ ಡಾ.ಅಂಬೇಡ್ಕರ್ ಸಂವಿಧಾನದಂತೆ ಎಲ್ಲರಿಗೂ ಮತದಾನ ಹಕ್ಕಿದೆ. ಆ ಮತವನ್ನು ಯೋಗ್ಯರಿಗೆ, ನಿಮ್ಮ ಕೈಗೆ ಸಿಗುವಂತ್ತವರಿಗೆ ಕೊಟ್ಟು ಕ್ಷೇತ್ರ ಅಭಿವೃದ್ಧಿಗೆ ಕೈಜೋಡಿಸಬೇಕು. ಇಲ್ಲದಿದ್ದಲ್ಲಿ ಅವರನ್ನು ಹುಡುಕಿಕೊಂಡು ಬೆಂಗಳೂರಿಗೆ ಹೋಗಬೇಕಾಗುತ್ತದೆ ಎಂಬುದನ್ನು ಅರಿಯಬೇಕಿದೆ. ಇನ್ನೂ ಗಂಡಸಿ ಕ್ಷೇತ್ರದಲ್ಲಿ 20_ವರ್ಷ ಶಾಸಕರಾಗಿ, ಒಮ್ಮೆ ಮಂತ್ರಿಯಾಗಿ ಏನು ಕೆಲಸ ಮಾಡಿದ್ದೀರಿ ಎಂಬುದನ್ನು ತೋರಿಸಿ, ಶಾಸಕನಾಗಿ ನಾನು ಏನು ಮಾಡಿದ್ದೇನೆ ಎಂಬುದನ್ನು ಸಾಕ್ಷಿ ಸಮೇತ ತೋರಿಸುತ್ತೇನೆ. ಇಂದು ಜಾವಗಲ್ ಹೇಗೆ ಅಭಿವೃದ್ಧಿಯಾಗಿದೆ ಹೋಗಿ ನೋಡಲಿ ತಿಳಿಯುತ್ತದೆ. ಅಲ್ಲದೆ ಕುಮಾರಣ್ಣ ಕೊಟ್ಟಿದ್ದ ಹಣವನ್ನು ಯಡಿಯೂರಪ್ಪರವರು ವಾಪಸ್ ಪಡೆದರು. ಇದರಿಂದ ಸ್ವಲ್ಪ ಕೆಲಸ ಕುಂಠಿತವಾಗಿತ್ತು. ಆದರೆ ದೃತಿಗೆಡದೆ ಹೆಚ್ಚು ಹಣ ತಂದು ಕೆಲಸ ಮಾಡಿಸಿದ್ದೇನೆ. ಕುಮಾರಣ್ಣ ಮುಖಳ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ರು. ಬೇರೆಯವರಿಗೆ ಏಕೆ ಹಾಗಲಿಲ್ಲ ಎಂಬುದನ್ನು ಅರಿತು ಮತ್ತೊಮ್ಮೆ ನಿಮ್ಮ ಆಶಿರ್ವಾದ ಕುಮಾರಣ್ಣ ಮತ್ತು ನನ್ನ ಮೇಲಿರಲಿ ಎಂದರು.


ಜೆಡಿಎಸ್ ಮುಖಂಡ ಹಾಲ್ತೊರೆ ರಾಮಕೃಷ್ಣೇಗೌಡ ಮಾತನಾಡಿ, ಶಾಸಕರು ಕೆಲಸ ಮಾಡಿಲ್ಲ ಅಂತ ಹೇಳುತಾರೆ ಆದರೆ ಅವರು ಸಾವಿರಾರು ಕೋಟಿ ಹಣ ತಂದು ಕೆಲಸ ಮಾಡಿಸಿದ್ದಾರೆ. ನಮ್ಮ ಹುಲುಗುಂಡಿ ಗ್ರಾಪಂ ವ್ಯಾಪ್ತಿಯಲ್ಲೆ 25 ಕೋಟಿ ರೂ, ಕೆಲಸ ಮಾಡಿಸಿದ್ದಾರೆ. ಇದಕ್ಕಾಗೆ ನಾವು ಅವರನ್ನು ಅಭಿನಂಧಿಸುತಿದ್ದೇವೆ. ಪ್ರತಿಯೊಂದು ಗ್ರಾಮಕ್ಕೂ ರಸ್ತೆ ಚರಂಡಿ ಕುಡಿಯುವ ನೀರು ಕೊಡುವ ಕೆಲಸವಾಗಿದೆ. ಹಗರೆಯಿಂದ ಬೊಮ್ಮೇನಹಳ್ಳಿ ಗಡಿ ತನಕ ಹೆಚ್.ಕೆ.ಕುಮಾರಸ್ವಾಮಿಯವರ ಕಾಲದಲ್ಲಿ ಕೆಲಸ ಆಗಿತ್ತು. ಆದರೆ ಈಗ ಶಾಸಕರು ಈಗ ಆ ರಸ್ತೆ ಕೆಲಸದೊಂದಿಗೆ ಇಉತರೆ ನೂರಾರು ಕೆಲಸ ಮಾಡಿಸುತಿದ್ದಾರೆ. ನಮ್ಮ ಪಂಚಾಯತಿ ಜೆಡಿಎಸ್‌ಗೆ ತವರು ಮನೆ ಇದ್ದಂತೆ. ಐದಕ್ಕೆ ಐದೂ ಲೀಡ್ ಕೊಡಲಾಗಿದೆ ಯಾವುದೇ ಕಾರಣಕ್ಕೂ ಓಟ್ ಕಡಿಮೆ ಮಾಡುವುದಿಲ್ಲ. ಇನ್ನು ಮುಂದೆಯೂ ಸಹ ಲೀಡ್ ಕೊಡುತ್ತೇವೆ. ಮತ್ತೆ ಶಾಸಕರನ್ನಾಗಿ ಲಿಂಗೇಶ್ ಅವರನ್ನು ಗೆಲ್ಲಿಸಲಿದ್ದೇವೆ ಎಂದರು.


ಜೆಡಿಎಸ್ ತಾಲೂಕು ಅಧ್ಯಕ್ಷ ತೋ.ಚ.ಅನಂತ ಸುಬ್ಬರಾಯ ಮಾತನಾಡಿ, ಮಾಜಿ ಸಚಿವ ಬಿ.ಶಿವರಾಮ್, ಶಾಸಕ ಕೆ.ಎಸ್.ಲಿಂಗೇಶ್ ಏನು ಕೆಲಸ ಮಾಡಿಸಿಲ್ಲ. ಎಂದಿದ್ದಾರೆ. ಅದಕ್ಕೆ ಅವರಿಗೆ ಸರಿಯಾದ ಉತ್ತರವನ್ನೆ ಕೊಡುತ್ತೇವೆ. ಅವರು ಗಂಡಸಿಯಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿದ್ದರು ಎಂಬುದನ್ನು ತೋರಿಸಲಿ. ನಮಗೆ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಬೇಕು. ಕೆ.ಎಸ್.ಲಿಂಗೇಶ್ ಶಾಸಕರಾಗಬೇಕು ಇದಕ್ಕೆ ಮತದಾರರು ಆಶಿರ್ವಾದ ಮಾಡಬೇಕು ಎಂದರು.


ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ, ಹುಲುಗುಂಡಿ ಗ್ರಾಪಂ ಅಧ್ಯಕ್ಷ ಮಲ್ಲೇಶ್, ಸದಸ್ಯ ಪುರುಷೊತ್ತಮ, ಮಾದೀಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ಆನಂದ್ ಮುಖಂಡರಾದ ಕಾಂತರಾಜು, ದಿಲೀಪ್, ಈಶ್ವರ್ ಪ್ರಸಾದ್, ಪಡುವಳಲು ಹರೀಶ್ ಇನ್ನಿತರರಿದ್ದರು.