ಜಿಲ್ಲೆ

ದೇವೇಗೌಡರ ಕೊಡುಗೆ ಅಪಾರ

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ಇಬ್ಬರು ಮಾಜಿ ಪ್ರಧಾನಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಎಚ್.ಡಿ.ದೇವೇಗೌಡ ಪಾತ್ರ ಹಿರಿದಾಗಿದೆ. ಶಾಸ್ತ್ರಿ ಡ್ಯಾಮ ಕಟ್ಟಿದರೇ ದೇವೇಗೌಡರು ಮೊದಲು-ಎರಡನೇ ಹಂತ ಪೂರ್ಣಗೊಳಿಸುವಲ್ಲಿ ಯಶಸ್ವಿಯಾದರು ಎಂದು ಜೆ‌‌ಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ ಹೇಳಿದರು.

ನಗರದಲ್ಲಿ ಕೃಷ್ಣಾ ಸಂತ್ರಸ್ತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, 1987 ರಲ್ಲಿ ನೀರಾವರಿ ಯೋಜನೆಗಳಿಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. 1994 ರಲ್ಲಿ ಮುಖ್ಯಮಂತ್ರಿ ಆದ ತಕ್ಷಣ ಪ್ರತಿವರ್ಷ ಒಂದು ಸಾವಿರ ಕೋಟಿ ರೂ‌.ಅನುದಾನ ಕೃಷ್ಣಾ ಮೇಲ್ದಂಡೆ ಯೋಜನೆಗೆ ನೀಡಿದರು.

ಅಲ್ಲದೆ ಪ್ರಮಾಣಿಕ ದಕ್ಷ ಅಧಿಕಾರಿ ಎಸ್.ಎಂ.ಜಾಮದಾರ ಅವರನ್ನು ಯುಕೆಪಿಗೆ ವಿಶೇಷ ಅಧಿಕಾರಿಯಾಗಿ ನೇಮಕಮಾಡಿದರು. ಸಂಪುಟದರ್ಜೆ ಅಧಿಕಾರ ನೀಡಿದರು. ಪರಿಣಾಮ ಆರು ವರ್ಷದಲ್ಲಿ ಯೋಜನೆ ಪೂರ್ಣಗೊಂಡಿತು. ಪ್ರಧಾನ ಮಂತ್ರಿ ಆದ ಬಳಿಕವು ದೇವೇಗೌಡರು ಸುಮ್ಮನೇ ಕೂಡಲಿಲ್ಲ. ರಾಷ್ಟ್ರ ವ್ಯಾಪಿ ನೀರಾವರಿ ಯೋಜನೆಗೆ ಒತ್ತು ನೀಡಿದರು. ಕೃಷ್ಣಾ ಮೇಲ್ದಂಡೆ ಯೋಜನೆಗೆ ವಿಶೇಷ ಅನುದಾನ ಒದಗಿಸಿದರು. ಇದರಿಂದ. 519 ವರೆಗೂ 2002 ರಲ್ಲಿ ನೀರು ನಿಲ್ಲಿಸಲು ಸಾಧ್ಯವಾಯಿತು.

ನಂತರ ಬಂದ ಸರ್ಕಾರಗಳು ನಿರ್ಲಕ್ಷ್ಯ ವಹಿಸಿವೆ. ಜನ ಪ್ರತಿನಿಧಿಗಳ ಇಚ್ಛಾ ಶಕ್ತಿಯ ಕೊರತೆಯೂ ಇದೆ. ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಏನೇ ಇರಲಿ ಕೂಡಲೇ ಮೂರನೇ ಹಂತ ಜಾರಿಗೊಳಿಸಬೇಕು. ನಾವೆಲ್ಲ ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು.