ಬೀದರ್: ತುಮಕೂರಿನ ಸಿದ್ಧಗಂಗಾ ಮಠದ ಸಂಘಸಿರಿ ಪ್ರಶಸ್ತಿಗೆ ಆಯ್ಕೆಯಾದ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಕರಂಜೆ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ನಗರದಲ್ಲಿ ಸನ್ಮಾನಿಸಿದರು.
ದೇವೇಂದ್ರ ಕರಂಜೆ ಅವರು ಎರಡು ದಶಕದಿಂದ ಜಿಲ್ಲೆಯಲ್ಲಿ ಸಾಹಿತ್ತಿಕ, ಸಾಂಸ್ಕøತಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ ಪರ ಕಾರ್ಯಗಳಿಗೆ ಸದಾ ಎತ್ತಿದ ಕೈ ಆಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ, ಚಟುವಟಿಕೆಗಳಿಗೆ ಬೆಂಬಲ ನೀಡುತ್ತ ಬಂದಿದ್ದಾರೆ. ಪರಿಷತ್ ಚುನಾವಣೆಯಲ್ಲಿ ತಮ್ಮ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.
ಕರಂಜೆ ಸರಳ, ಸಜ್ಜನ ವ್ಯಕ್ತಿಯಾಗಿದ್ದಾರೆ. ತಮ್ಮದೇ ಆದ ಸ್ನೇಹಿತರ ಬಳಗ ಹೊಂದಿದ್ದಾರೆ. ಸಂಘಟನಾ ಚತುರರಾಗಿದ್ದಾರೆ ಎಂದು ಕರ್ನಾಟಕ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ ನುಡಿದರು.
ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮನಸ್ಸುಗಳವರಾಗಿದ್ದಾರೆ. ಅನೇಕ ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ಬೆಳೆಸಿದ ಹಿರಿಮೆ ಅವರದ್ದಾಗಿದೆ. ಅವರಿಗೆ ಪ್ರಶಸ್ತಿ ದೊರೆತಿರುವುದು ಸಂತಸ ಉಂಟು ಮಾಡಿದೆ ಎಂದು ಹೇಳಿದರು.
ಕರಂಜೆ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಶ್ರೀಗಳ ಸೇವೆ ಹಾಗೂ ಮಠಕ್ಕೆ ನೀಡಿದ ಕೊಡುಗೆಗಾಗಿ ಅವರನ್ನು ಸಂಘಸಿರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪುರ ನುಡಿದರು.
ಸಿದ್ಧಗಂಗಾ ಮಠದಲ್ಲಿ ನ. 18 ರಂದು ನಡೆಯಲಿರುವ ಹಳೆಯ ವಿದ್ಯಾರ್ಥಿಗಳ ಸಂಘದ ಸರ್ವ ಸದಸ್ಯರ ಮಹಾ ಅಧಿವೇಶನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ತಿಳಿಸಿದರು.
ಸಂಘಸಿರಿ ಪ್ರಶಸ್ತಿ ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ಸಮಾಜಮುಖಿ ಕಾರ್ಯಗಳಲ್ಲಿ ಇನ್ನಷ್ಟು ಉತ್ಸಾಹದಿಂದ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದೆ ಎಂದು ಸನ್ಮಾನ ಸ್ವೀಕರಿಸಿದ ದೇವೇಂದ್ರ ಕರಂಜೆ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಟಿ.ಎಂ. ಮಚ್ಚೆ, ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ರಮೇಶ ಪಾಟೀಲ ಪಾಶಾಪುರ, ಸದಸ್ಯ ಶಶಿಕಾಂತ ಪಾಟೀಲ ತೇಗಂಪುರ, ನಿವೃತ್ತ ಮುಖ್ಯಶಿಕ್ಷಕ ಸಿದ್ದಾರೆಡ್ಡಿ ನಾಗೋರಾ, ಸಾಹಿತಿಗಳಾದ ವಿದ್ಯಾವತಿ ಬಲ್ಲೂರ, ಕಸ್ತೂರಿ ಪಟಪಳ್ಳಿ, ಮುಖಂಡರಾದ ಕಾಶೀನಾಥ ಬೇಲೂರೆ, ಪವನ್‍ಕುಮಾರ ಬಿರಾದಾರ, ಜಗನ್ನಾಥ ಕಮಲಾಪುರೆ, ಜಗನ್ನಾಥ ಪಾಟೀಲ, ಶಿವಪುತ್ರ ಪಟಪಳ್ಳಿ, ಶಿವರಾಜ ಕೊಡ್ಡೆ, ಹಾವಯ್ಯ ಸ್ವಾಮಿ, ಪರಮೇಶ್ವರ ಬೋಳಶೆಟ್ಟಿ, ಅನಿಲಕುಮಾರ ಖಾನಾಪುರೆ ಇದ್ದರು.