ಜಿಲ್ಲೆ

ದೇವಾಲಯಗಳು ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಬೇಕು

ಚಿತ್ರದುರ್ಗ: ಶಿಕ್ಷಣ ಪಡೆಯದ ಹೊರತು ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

ಚಿತ್ರದುರ್ಗ ತಾಲೂಕು ಮಲ್ಲಾಪುರದಲ್ಲಿ ಭಾನುವಾರ ಕೊಲ್ಲಾಪುರ ಶ್ರೀ ಮಹಾಲಕ್ಷ್ಮೀ ದೇವಾಲಯ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯವಹಿಸಿ ಆರ್ಶೀವಚನ ನೀಡಿದರು.

ಶಿಕ್ಷಣ ಯಾವುದೇ ಸಮುದಾಯಕ್ಕೆ ಸೀಮಿತವಲ್ಲ. ಎಲ್ಲ ಜಾತಿ, ವರ್ಗದವರಿಗೂ ಶಿಕ್ಷಣ ಪಡೆಯಲು ಸಾಧ್ಯವಿದೆ. ಸಮುದಾಯದ ಯುವಕರು ದುಡಿಮೆಗೆ ಒತ್ತು ನೀಡಬೇಕು. ಬಡತನದ ನೆಪದಲ್ಲಿ ಶಿಕ್ಷಣದಿಂದ ವಿಮುಖರಾದರೆ ನಮ್ಮ ಅವನತಿಗೆ ನಾವೇ ಕಾರಣರಾಗುತ್ತೇವೆ ಎಂದು ಎಚ್ಚರಿಸಿದರು.

ಮನೆಯ ಹಿರಿಯರು ಸರಿದಾರಿಯಲ್ಲಿ ಸಾಗಿದರೆ ಅದು ಕಿರಿಯರಿಗೆ ಮಾರ್ಗದರ್ಶನವಾಗುತ್ತದೆ. ಗ್ರಾಮಗಳಲ್ಲಿ ಸೌಹಾರ್ದ ವಾತಾವರಣ ನಿರ್ಮಾಣಕ್ಕೆ ಎಲ್ಲ ಸಮುದಾಯಗಳೂ ಒಗ್ಗೂಡಿ ಸಾಗಬೇಕು. ದೇವಾಲಯಗಳು ಧಾರ್ಮಿಕ ಶ್ರದ್ಧಾಕೇಂದ್ರಗಳಾಗಬೇಕು ಎಂದರು.

ದಲಿತರು ಮತಾಂತರರಿಂದ ದೂರವಿರಬೇಕು. ಮತಾಂತರವಾದರೆ ಧಾರ್ಮಿಕ ಅಲ್ಪ ಸಂಖ್ಯಾತರಾಗಬೇಕಾಗುತ್ತದೆ. ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ. ಆದ್ದರಿಂದ ಜಾತಿ ಗಣತಿ ವೇಳೆ ಧರ್ಮದ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ಮಾದಿಗ ಎಂದು ಬರೆಸುವಂತೆ ಸಲಹೆ ನೀಡಿದರು.

ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಬದಲಾವಣೆಗಳೆಡೆ ಗಮನ ನೀಡುವ ಮೂಲಕ ಮಾದಿಗ ಸಮುದಾಯ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.

ನಮ್ಮ ಉನ್ನತಿ, ಬೆಳವಣಿಗೆಗೆ ನಾವೇ ಶಿಲ್ಪಿಗಳಾಗಬೇಕು. ದುಶ್ಚಟಗಳಿಂದ ನಾನು ದೂರ ಉಳಿದಿದ್ದರಿಂದಾಗಿ ರಾಜಕೀಯ ರಂಗದಲ್ಲಿ ಅಧಿಕಾರ ಪಡೆಯಲು ಸಾಧ್ಯವಾಯಿತು ಎಂದು ತಿಳಿಸಿದರು.

ಎಂಎಲ್‌ಸಿ ಕೆ.ಎಸ್. ನವೀನ್ ಮಾತನಾಡಿ, ದೇವಾಲಯಗಳು ಹಿಂದುಗಳನ್ನು ಬೆಸೆಯುವ ಕೇಂದ್ರಗಳಾಗಿವೆ. ಗ್ರಾಮಗಳ ಬಹುತೇಕ ವಿಷಯಗಳು ನಿರ್ಧಾರವಾಗುವುದು ದೇವಾಲಯಗಳಲ್ಲಿ. ಅಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ವಾತಾವರಣ ನಿರ್ಮಿಸುವಲ್ಲಿ ದೇವಾಲಗಳ ಪಾತ್ರ ಅನನ್ಯವಾಗಿದೆ ಎಂದರು.

ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿದರು.

ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್,ಮಾಜಿ ಸದಸ್ಯ ನರಸಿಂಹರಾಜು, ಡಿಸಿಸಿ ಕಾರ್ಯಾಧ್ಯಕ್ಷ ಹಾಲಸ್ವಾಮಿ, ಜಾನುಕೊಂಡ ಗ್ರಾಪಂ ಅಧ್ಯಕ್ಷೆ ಮಂಜುಳಾ, ಮೋಹನ್, ಶ್ರೀ ಮಾದಾರ ಚನ್ನಯ್ಯ ಸೇವಾ ಸಮಿತಿಯ ಹೂಡಿ ಮಂಜುನಾಥ್, ಪರಶುರಾಮ್ ಹೊನ್ನಳ್ಳಿ, ಯೋಗೀಶ್ ಸೋರೆಕುಂಟೆ, ಸಂದೀಪ್‌ಗುಂಡಾರ್ಪಿ, ರವಿಮಲ್ಲಾಪುರ, ಮಾದಾರ ಚನ್ನಯ್ಯ ನೌಕರರ ಸೇವಾಸಮಿತಿ ಸದಸ್ಯ ಮಾರಘಟ್ಟ ಜಯಪ್ಪ, ಬೊಮ್ಮೇನಹಳ್ಳಿ ಮಹಾಂತೇಶ್, ನಾಗರಾಜ್, ಅನಂತ್, ಲಕ್ಷ್ಮೀಸಾಗರ ದೇವರಾಜ್, ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಸಿಇಒ ಎಸ್. ರಾಘವೇಂದ್ರ, ವ್ಯವಸ್ಥಾಪಕ ಒ. ಮಲ್ಲಿಕಾರ್ಜುನ್, ಗ್ರಾಮದ ಮುಖಂಡರು ಇದ್ದರು.

...ಕೋಟ್...

ದೇವಾಲಗಳು ಮನಸ್ಸುಗಳನ್ನು ಬೆಸೆಯುವ ಕೇಂದ್ರಗಳಾಗಿವೆ. ಆದರೆ, ಮೂಢನಂಬಿಕೆಗೆ ಬಲಿಯಾಗಿ ಯಾರೂ ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು.

ಜಿ.ಎಚ್. ತಿಪ್ಪಾರೆಡ್ಡಿ, ಮಾಜಿ ಶಾಸಕ, ಚಿತ್ರದುರ್ಗ.

----

ಸನ್ಮಾನ

ಒಳ ಮೀಸಲಾತಿ ಜಾರಿಗೆ ಶ್ರಮಿಸಿದ ಶ್ರೀ ಮಾದಾರ ಚನ್ನಯ್ಯ ಶ್ರೀಗಳು, ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಬಳ್ಳಾರಿ ಎಚ್. ಹನುಮಂತಪ್ಪ, ಜಿಪಂ ಮಾಜಿ ಸದಸ್ಯ ಬಿ.ಪಿ. ಪ್ರಕಾಶಮೂರ್ತಿ, ಹುಲ್ಲೂರು ಕುಮಾರಸ್ವಾಮಿ, ಚಿತ್ರದುರ್ಗದ ವೈದ್ಯ ಡಾ.ಇ. ಸತೀಶ್, ಹಾಗೂ ಶಾಸಕ ತಿಪ್ಪಾರೆಡ್ಡಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

-----