ಜಿಲ್ಲೆ

ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಯಾಗಲಿ:ಸಂಸ್ಥೆಗಳ ಮಹಾಸಂಘ

ಹಾಸನ: ದೇವಸ್ಥಾನದ ಪಾವಿತ್ರ್ಯತೆ, ಶಿಷ್ಟಾಚಾರ, ಸಂಸ್ಕೃತಿ ಕಾಪಾಡುವ ಉದ್ದೇಶದಿಂದ ಕರ್ನಾಟಕ ದೇವಸ್ಥಾನ- ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಅಧಿವೇಶನದಲ್ಲಿ ರಾಜ್ಯದ 500ಕ್ಕೂ ಅಧಿಕ ದೇವಸ್ಥಾನಗಳಲ್ಲಿ ಮತ್ತು ಹಾಸನದ 30ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಭಾರತೀಯ ಸಂಸ್ಕೃತಿಯ ಪ್ರಕಾರ ವಸ್ತ್ರ ಸಂಹಿತೆ ಜಾರಿಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕರ್ನಾಟಕದ ಸಮನ್ವಯಕರಾದ ಚಂದ್ರ ಮೊಗವೀರ ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ದೇವಸ್ಥಾನಗಳ ಮುಂಭಾಗದಲ್ಲಿ ವಸ್ತ್ರ ಸಂಹಿತೆಯ ಫಲಕಗಳನ್ನು ಹಾಕಿ ಜನರಿಗೆ ಬೋಧನೆ ಮಾಡುವುದು, ದೇವಸ್ಥಾನದ ಪಾವಿತ್ರ್ಯತೆಯ ರಕ್ಷಣೆ ಮತ್ತು ಭಾರತೀಯ ಸಂಸ್ಕೃತಿಯ ಪಾಲನೆಯಾಗುವ ಉದ್ದೇಶದಿಂದ ದೇವಸ್ಥಾನಕ್ಕೆ ಬರುವ ಭಕ್ತರು ತುಂಡು ಬಟ್ಟೆ ಧರಿಸುವ ಬದಲು, ಭಾರತೀಯ ಸಂಸ್ಕೃತಿಯ ವಸ್ತ್ರ ಸಂಹಿತೆ ಪಾಲನೆ ಮಾಡಿ ದೇವಸ್ಥಾನ ವ್ಯವಸ್ಥಾಪನೆಗೆ ಸಹಕರಿಸಲು ಜನಜಾಗೃತಿ ಮೂಡಿಸಲಾಗುವುದು ಎಂದರು.
ಮಹಿಳೆಯರು ಚೂಡಿದಾರ, ಲಂಗ-ದಾವಣಿ, ಸಲ್ವಾರ್-ಕುರ್ತಾ ಜತೆಗೆ ಸೀರೆ ಮುಂತಾದ ಪಾರಂಪರಿಕ ಸಾತ್ವಿಕ ವೇಷಭೂಷಣಗಳನ್ನು ಧರಿಸಬೇಕು ಮತ್ತು ಪುರುಷರು ಕುರ್ತಾ, ಧೋತಿ, ಲುಂಗಿ, ಪೈಜಾಮ ಅಥವಾ ಸಾಮಾನ್ಯ ಶರ್ಟ್-ಪ್ಯಾಂಟ್‌ಗಳನ್ನು ಹಾಕಬೇಕು. ಇವುಗಳನ್ನು ಹೊರತಾಗಿ ಪಾಶ್ಚಿಮಾತ್ಯ ಉಡುಪುಗಳಾದ ಸ್ಕರ್ಟ್, ಮಿಡಿ, ಶಾರ್ಟ್ ಪ್ಯಾಂಟ್, ಸ್ಯಾಂಡೋ ವೆಸ್ಟ್, ಜೀನ್ಸ್, ಸ್ಕರ್ಟ್, ಸ್ಲೀವ್‌ಲೆಸ್ ಡ್ರೆಸ್, ನೈಟ್ ಡ್ರೆಸ್, ಸಾಕ್ಸ್ ಇತ್ಯಾದಿ ಉಡುಪುಗಳನ್ನು ಹಾಕಬಾರದೆಂದು ವಿನಂತಿಸುತ್ತೇವೆ ಎಂದು ಮನವಿ ಮಾಡಿದರು.
ದೇವಸ್ಥಾನಗಳನ್ನು ಧರ್ಮ ಪ್ರಚಾರ ಕೇಂದ್ರವನ್ನಾಗಿ ಮಾಡುವುದು, ದೇವಸ್ಥಾನಗಳ ಸಂರಕ್ಷಣೆ, ಸಂಘಟನೆಯ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಸ್ಥರದ ಅಧಿವೇಶನಗಳನ್ನು ಮಾಡಿ, ದೇವಸ್ಥಾನಗಳ ಸಂಘಟನೆ ಮಾಡಲಾಗುವುದು. ಅದಲ್ಲದೆ ಹಿಂದೂ ಸಮಾಜಕ್ಕೆ ಹಿಂದೂ ಧರ್ಮದ ಬಗ್ಗೆ ಶಿಕ್ಷಣ ನೀಡಲು ಮುಂದಿನ ದಿನಗಳಲ್ಲಿ ರಾಜ್ಯದ 50 ದೇವಸ್ಥಾನಗಲ್ಲಿ ಮಕ್ಕಳು, ಸ್ತ್ರೀ -ಪುರುಷರಿಗೆ ನಿಯಮಿತಿವಾಗಿ ಹಿಂದೂ ಧರ್ಮದ ಶಿಕ್ಷಣ ನೀಡುವ ವರ್ಗಗಳ್ನು ಸಹ ಪ್ರಾರಂಭ ಮಾಡಲಾಗುವುದು. ಇದಕ್ಕೆ ಸಂಬಂಧಿಸಿ ಒಂದು ಪಠ್ಯಕ್ರಮವನ್ನು ಸಹ ರಚಿಸಲಾಗಿದೆ. ಈಗಾಗಲೇ ರಾಜ್ಯದ 300 ಸ್ಥಳಗಳಲ್ಲಿ ಈ ವರ್ಗ ಪ್ರಾರಂಭಿಸಲಾಗಿದೆ. ಮುಂದೆ ಪ್ರತಿ ದೇವಸ್ಥಾನಗಳಲ್ಲಿ ಹಿಂದೂ ಧರ್ಮ ಜಾಗೃತಿ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಲಾಗುವುದು ಎಂದರು.
ಧಾರ್ಮಿಕ ದತ್ತಿ ಇಲಾಖೆಯ ಸಚಿವರನ್ನು ಈಗಾಗಲೇ ಭೇಟಿ ಮಾಡಿ ಸರ್ಕಾರಿ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ, ಧರ್ಮ ಶಿಕ್ಷಣ ಫಲಕಗಳನ್ನು ಅಳವಡಿಸಲು ಮನವಿ ನೀಡಲಾಗಿದೆ. ಮಾನ್ಯ ಸಚಿವರು ಈ ಬಗ್ಗೆ ರಾಜ್ಯ ಧಾರ್ಮಿಕ ಪರಿಷತ್‌ನಲ್ಲಿ ಚರ್ಚೆ ಮಾಡಿ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಚಂದ್ರ ಮೊಗವೀರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಕಾಳಿಕಾಂಬ ದೇವಸ್ಥಾನದ ಟ್ರಸ್ಟಿ ನಾಗೇಶ್, ಉತ್ತರ ಉತ್ತಿಷ್ಠ ಗಣಪತಿ ದೇವಸ್ಥಾನದ ಟ್ರಸ್ಟಿ ರಾಘವೇಂದ್ರ ಆಚಾರ್, ರಾಜ ವೆಂಕಟೇಶ್, ವಿಜಯಲಕ್ಷ್ಮೀ ದೇವಸ್ಥಾನದ ಧರ್ಮದರ್ಶಿ ಶಶಿಧರ್, ಕೋಟೆಬಾಗಿಲು ಆಂಜನೇಯ ದೇವಸ್ಥಾನದ ಧರ್ಮದರ್ಶಿ ಲವ ಕುಮಾರ್, ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ಧರ್ಮದರ್ಶಿ ನಾಗೇಂದ್ರ, ಸುಬ್ರಹ್ಮಣ್ಯ ದೇವಸ್ಥಾನದ ಧರ್ಮ ದರ್ಶಿ ಗೋವಿಂದರಾಜು ಸೇರಿದಂತೆ ಇತರೆ ದೇವಸ್ಥಾನದ ಟ್ರಸ್ಟಿಗಳು ಉಪಸ್ಥಿತರಿದ್ದರು.