ಜಿಲ್ಲೆ

ದೇವಾಲಯಗಳಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ

ಸುಂಟಿಕೊಪ್ಪ: ಸುಂಟಿಕೊಪ್ಪ ಸೇರಿದಂತೆ ಹೋಬಳಿ ವ್ಯಾಪ್ತಿಯ ದೇವಾಲಯಗಳಲ್ಲಿ ನವರಾತ್ರಿ ಉತ್ಸವಕ್ಕೆ ಸೋಮವಾರ ಚಾಲನೆ ದೊರೆಯಿತು.

ಇಲ್ಲಿನ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯದಲ್ಲಿ ಸೋಮವಾರ ಬೆಳಗ್ಗೆ ದೇವಿಗೆ ನೈವೇದ್ಯ ಪೂಜೆಯೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು.

ದೇವಾಲಯದ ಪ್ರಧಾನ ಅರ್ಚಕ ಮಂಜುನಾಥ್ ಉಡುಪ ಅವರ ನೇತೃತ್ವದಲ್ಲಿ ದೇವಿಗೆ ಕುಂಕುಮಾರ್ಚನೆ, ಪುಷ್ಪಾರ್ಚನೆ, ದೀಪರಾಧನೆ ನಡೆಯಿತು.

ಸಂಜೆ ವಿಶೇಷ ಪೂಜೆ, ವಿಧಿ ವಿಧಾನಗಳು ನಡೆದವು. ನಂತರ ನವರಾತ್ರಿಯ ಮೊದಲ ದಿನವಾದ ಸೋಮವಾರ ದೇವಿಗೆ ಅರಿಶಿಣ ಅಲಂಕಾರ ಮಾಡುವುದರ ಮೂಲಕ ಭಕ್ತರಿಗೆ ಪೂಜೆಗೆ ಅವಕಾಶ ನೀಡಲಾಯಿತು.

ಇಲ್ಲಿನ ಮಾದಾಪುರ ರಸ್ತೆಯಲ್ಲಿರುವ ವೃಕ್ಷೋದ್ಭವ ಮಹಾಗಣಪತಿ ದೇವಾಲಯದಲ್ಲಿ ನವರಾತ್ರಿ ಮೊದಲ ದಿನ ದೇವಿಯರಿಗೆ ವಿಶೇಷ ಪೂಜೆ, ಮಹಾಪೂಜೆ, ವೀಳ್ಯದೆಲೆ ಅರ್ಚನೆಯ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.

ಸಮೀಪದ ಕಂಬಿಬಾಣೆ ರಾಮ ಮತ್ತು ಚಾಮುಂಡೇಶ್ವರಿ ದೇವಾಲಯದಲ್ಲಿ 70ನೇ ವರ್ಷದ ನವರಾತ್ರಿ ಅಂಗವಾಗಿ ಸೋಮವಾರ ಗಣಹೋಮದೊಂದಿಗೆ ಚಾಲನೆ ನೀಡಲಾಯಿತು.ಆರಾಧನೆ, ದೀಪಾಲಂಕಾರ, ನೈವೇದ್ಯ ಪೂಜೆಗಳು ನಡೆದವು.

ನಂತರ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಮಂಗಳವಾರದಿಂದ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಸೋಮವಾರ ರಾತ್ರಿ ದೇವಾಲಯದ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.

ಬುಧವಾರ ರಾತ್ರಿ ಭೂತನಕಾಡು ಓಂ ಶಕ್ತಿ ತಂಡದಿಂದ ಭಜನಾ ಕಾರ್ಯಕ್ರಮ, ಶುಕ್ತವಾರ ಕುಶಾಲನಗರ ತಂಡದಿಂದ ಭಜನೆ, ಶನಿವಾರ ಬೆಳಗ್ಗೆ ದುರ್ಗಾಹೋಮ ನಡೆಯಲಿದೆ.

ಅ.1ರಂದು ಸಾಮೂಹಿಕ ವಾಹನ ಪೂಜೆ, ಅ.2ರ ರಾತ್ರಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಶ್ರೀಚಾಮುಂಡೇಶ್ವರಿ ದೇವಿಯ ಶೋಭಾಯಾತ್ರೆ ಹಾಗೂ ಅನ್ನದಾನದೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದೆ.

ಕೊಡಗರಹಳ್ಳಿ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದಲ್ಲಿ ನವರಾತ್ರಿ ಪೂಜೆಯ ಮೊದಲ ದಿನ ವಿಶೇಷ ಪೂಜೆಗಳು ನಡೆದವು. ಶ್ರೀರಂಗಪೂಜೆ, ಪಂಚಾಮೃತ ಅಭಿಷೇಕಗಳು ನಡೆದು ನಂತರ ಮಹಾಪೂಜೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆದವು.