ಜಿಲ್ಲೆ

ದೇವಾಲಯಗಳ ನಿರ್ಮಾಣದಿಂದ ಸಮಾನತೆ, ಭ್ರಾತೃತ್ವ ಸಾಧ್ಯ

ಆಲೂರು: ಗ್ರಾಮಗಳಲ್ಲಿ ದೇವಾಲಯಗಳ ನಿರ್ಮಾಣದಿಂದ ಸಮಾನತೆ, ಭ್ರಾತೃತ್ವ, ಧಾರ್ಮಿಕ ಜಾಗೃತಿಯೊಂದಿಗೆ ಸಾಮರಸ್ಯದ ಜೀವನ ನಡೆಸಲು ಸಾಧ್ಯ ಎಂದು ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಶ್ರೀಸಂಸ್ಥಾನ ಹಿರೇಮಠ ಕಾರ್ಜುವಳ್ಳಿಯ ಪೀಠಾಧ್ಯಕ್ಷ ಶ್ರೀಸದಾಶಿವ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಪಾಳ್ಯ ಹೋಬಳಿಯ ಗುಂಡನಬೆಳ್ಳೂರು ಗ್ರಾಮದ ಶ್ರೀಮಲ್ಲೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರ ಮತ್ತು ಜಂಪೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ದೇವಸ್ಥಾನಗಳು ಮನುಷ್ಯರಿಗೆ ಶಾಂತಿ ನೆಮ್ಮದಿ ನೀಡುವ ಧಾರ್ಮಿಕ ಕೇಂದ್ರಗಳಾಗಿವೆ. ಮೌಲ್ಯಯುತ ಜೀವನ ನಡೆಸಲು ಅಧ್ಯಾತ್ಮ ಸಹಕಾರಿಯಾಗಿದೆ. ಯಜ್ಞ ಯಾಗಾದಿಗಳು ಪರಿಸರಕ್ಕೂ ಪೂರಕವಾಗಿವೆ. ಮನುಷ್ಯ ತಮ್ಮಲ್ಲಿರುವ ದ್ವೇಷ, ಅಸೂಯೆಗಳನ್ನು ಬದಿಗೊತ್ತಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸಿಕೊಳ್ಳಬೇಕು. ದೇವಾಲಯಗಳಿಂದ ಸಾಮಾಜಿಕ, ಧಾರ್ಮಿಕ ಜಾಗೃತಿ ಮೂಡಬೇಕು. ಸಾಮೂಹಿಕ ಆಚರಣೆಗಳಿಂದ ಸಮಾಜದಲ್ಲಿ ಒಗ್ಗಟ್ಟು ಮೂಡುವುದರೊಂದಿಗೆ ಸಾಮರಸ್ಯದ ಜೀವನಕ್ಕೂ ವೇದಿಕೆಯಾಗಲಿದೆ ಎಂದರು.

ಕಲಶಾರೋಹಣ ನೆರವೇರಿಸಿದ ಹಾಸನ ನಗರದ ತಣ್ಣೀರುಹಳ್ಳ ಮಠದ ಶ್ರೀವಿಜಯಕುಮಾರ ಸ್ವಾಮೀಜಿ ಆಶೀರ್ವಚನ ನೀಡಿ, ಯಾವುದೇ ಗ್ರಾಮಕ್ಕೆ ಕಾಲಿಟ್ಟರೂ ಗ್ರಾಮಸ್ಥರ ಶಕ್ತಿಗನುಸಾರ ಒಂದು ದೇವಾಲಯದ ಜೀರ್ಣೋದ್ಧಾರ ದೃಶ್ಯಗಳನ್ನು ಕಾಣಬಹುದು. ಇದು ಜನ ದೇವರ ಬಗ್ಗೆ ಇಟ್ಟಿರುವ ನಂಬಿಕೆ ಹಾಗೂ ಭಕ್ತಿ ತೋರಿಸುತ್ತದೆ ಎಂದರು. ಗ್ರಾಮಗಳಲ್ಲಿನ ದೇಗುಲಗಳು ಸಮಾಜದಲ್ಲಿ ಶಾಂತಿ, ನೆಮ್ಮದಿ ಸೌಹಾರ್ದದ ಪ್ರತೀಕವಾಗಿವೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸನಾತನ ಧರ್ಮ, ಸಂಸ್ಕೃತಿಯ ಪ್ರತೀಕವಾದ ಮಠಮಾನ್ಯಗಳು ಹಾಗೂ ಧಾರ್ಮಿಕ ಕೇಂದ್ರಗಳಾದ ದೇವಾಲಯಗಳು, ಮನುಷ್ಯನಿಗೆ ಸುಖ, ಶಾಂತಿ, ನೆಮ್ಮದಿ ಕರುಣಿಸುವ ಶ್ರದ್ಧಾ ಕೇಂದ್ರಗಳಾಗಿವೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಸಂಕ್ಲಾಪುರ ಮಠದ ಶ್ರೀ ಧರ್ಮರಾಜೇಂದ್ರ ಸ್ವಾಮೀಜಿ, ಶಾಸಕ ಸಿಮೆಂಟ್ ಮಂಜು, ಹಾಸನ ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಕಾಂಗ್ರೆಸ್ ಹಿರಿಯ ಮುಖಂಡ ಹೆಮ್ಮಿಗೆ ಮೋಹನ್, ಜಿಲ್ಲಾ ಸಹಕಾರ ಒಕ್ಕೂಟಗಳ ಅಧ್ಯಕ್ಷ ಎಸ್.ಎನ್.ಪ್ರಕಾಶ್, ಕಾಫಿ ಬೆಳೆಗಾರ ಬಸವಣ್ಣ, ತಾಲೂಕು ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ರೇಣುಕಾ ಪ್ರಸಾದ್, ಸಹ ಕಾರ್ಯದರ್ಶಿ ಡಾ.ಜಯರಾಜ್, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಅಜಿತ್ ಚಿಕ್ಕಕಣಗಾಲ್, ಗ್ರಾಮದ ಹಿರಿಯ ಮುಖಂಡರಾದ ಬಿ.ಡಿ ಧರ್ಮಪ್ಪ, ಸಂದೀಪ, ಲಿಂಗರಾಜು, ಬಸವರಾಜು, ಬಿ.ಕೆ.ಪ್ರಕಾಶ್ ಸೇರಿದಂತೆ ಶ್ರೀಮಲ್ಲೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರ ಸಮಿತಿಯವರು, ಗುಂಡನಬೆಳ್ಳೂರು, ಬೂದನಹಳ್ಳಿ ಹಾಗೂ ಕೆಂಚನಹಳ್ಳಿಪುರ ಗ್ರಾಮಸ್ಥರು ಭಾಗವಹಿಸಿದ್ದರು.