ಜಿಲ್ಲೆ

ದೇವಾಲಯಗಳ ಟಾರ್ಗೆಟ್ ಏಕೆ?, ತೆರವಿಗೆ ವಿವಿಧ ಹಿಂದುಪರ ಸಂಘಟನೆಗಳ ಆಕ್ರೋಶ ಅಧಿಕಾರಿಗಳಿಗೆ ತಲೆಬಿಸಿ

ರಾಜೇಶ್ ಎಸ್.ಜಿ. ಮುಕ್ಕೇನಹಳ್ಳಿ

ಅನಧಿಕೃತ ದೇಗುಲಗಳ ತೆರವು ಆದೇಶಕ್ಕೆ ಹಿಂದುಪರ ಸಂಘಟನೆಗಳು ಕಿಡಿಕಾರಿವೆ. ತಾಲೂಕಿನಲ್ಲಿ ಹಿಂದು ದೇಗುಲಗಳನ್ನು ಗುರಿಯಾಗಿಸಿ ಆದೇಶ ಹೊರಡಿಸಲಾಗಿದೆ. ಹಾಗಾದರೆ ಅನ್ಯಧರ್ಮದ ಧಾರ್ಮಿಕ ಕೇಂದ್ರಗಳು ಅನಧಿಕೃತವಲ್ಲವೇ ಎಂದು ಪ್ರಶ್ನಿಸಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ 4, ಹಾಗೂ ತಾಲೂಕಿನ ವಿವಿಧೆಡೆ 3 ದೇಗುಲಗಳ ತೆರವಿಗೆ ಪಟ್ಟಿ ಬಿಡುಗಡೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ. ಇದರ ನಡುವೆ ಕೋರ್ಟ್ ಆದೇಶ ಪಾಲನೆಗೆ ಮುಂದಾಗಿರುವ ಅಧಿಕಾರಿಗಳು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

2013ರ ಸುಪ್ರೀಂಕೋರ್ಟ್ ಆದೇಶದಂತೆ 2 ವರ್ಷದ ಹಿಂದೆಯೇ 6 ದೇವಾಲಯಗಳನ್ನು ತಾಲೂಕು ಆಡಳಿತ ತೆರವುಗೊಳಿಸಿತ್ತು. ಈಗ 7 ದೇವಾಲಯಗಳ ಪಟ್ಟಿ ಬಿಡುಗಡೆಗೊಂಡಿದ್ದು, ಮಸೀದಿ, ಚರ್ಚ್‌ಗಳ ಉಲ್ಲೇಖವಿಲ್ಲ, ಈ ಹಿನ್ನೆಲೆಯಲ್ಲಿ ಮಸೀದಿ, ಚರ್ಚ್‌ಗಳು ಅನಧಿಕೃತವಲ್ಲವೇ ಎಂಬ ಪ್ರಶ್ನೆ ಮೂಡಿದೆ.

ಅಧಿಕಾರಿ ವರ್ಗದ ಮೇಲೆ ಗರಂ: 2009ರ ನಂತರ ಅನಧಿಕೃತವಾಗಿ ನಿರ್ಮಾಣವಾಗಿರುವ ದೇವಾಲಯಗಳನ್ನು ತೆರವುಗೊಳಿಸುವಂತೆ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ತಾಲೂಕು ಆಡಳಿತ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿರುವ ದೇವಾಲಯಗಳು 2009ಕ್ಕೂ ಹಿಂದೆ ನಿರ್ಮಾಣವಾಗಿವೆ ಎಂಬುದು ಸ್ಥಳೀಯರ ವಾದವಾಗಿದೆ. 2009ರ ಹಿಂದೆ ನಿರ್ಮಾಣವಾಗಿದ್ದರೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎನ್ನುವುದಾದರೆ ಆ ದೇವಾಲಯವನ್ನು ತೆರವುಗೊಳಿಸಿ ಸೂಕ್ತ ಸ್ಥಳದಲ್ಲಿ ಮರು ನಿರ್ಮಾಣ ಮಾಡಬೇಕು ಎಂದು ಆದೇಶ ಹೇಳುತ್ತದೆ. ಆದರೆ ಯಾವ ಮಾನದಂಡದಲ್ಲಿ ಅನಧಿಕೃತ ದೇವಾಲಯಗಳು ಎಂದು ಅಧಿಕಾರಿಗಳು ಗುರುತು ಮಾಡಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.

ಅನಧಿಕೃತ ಪಟ್ಟಿಯಲ್ಲಿರುವ ದೇವಾಲಯಗಳು; ಅಂತರಹಳ್ಳಿ ವೀರಕೆಂಪಮ್ಮ ದೇವಾಲಯ, ಕನಕೇನಹಳ್ಳಿಯ ಕುಕ್ಕಲಮ್ಮ, ನಗರದ ಶಾಂತಿನಗರದ ರಸ್ತೆ ಬದಿಯ ಬಸವೇಶ್ವರ ದೇವಾಲಯ, ಆಂಜನೇಯಸ್ವಾಮಿ ದೇವಾಲಯಕ್ಕೆ ಅಂಟಿಕೊಂಡ ಅಶ್ವತ್ಥಕಟ್ಟೆ, ವೀರಭದ್ರನಪಾಳ್ಯದ ಗಣೇಶ ದೇವಾಲಯ, ಸಂಜಯನಗರ ನೆಲಮಂಗಲ ರಸ್ತೆಯ ಶ್ರೀಧ್ಯಾನ ಆಂಜನೇಸ್ವಾಮಿ ದೇವಾಲಯ, ಶನಿಮಹಾತ್ಮ ದೇವಾಲಯಗಳನ್ನು ತೆರವುಗೊಳಿಸಲು ತಾಲೂಕು ಆಡಳಿತ ಮುಂದಾಗಿದೆ.

ಸಾರ್ವಜನಿಕರ ಮನವೊಲಿಸಿ ತೆರವು ಕಾರ್ಯ ಕೈಗೊಳ್ಳಲಾಗಿದೆ. ಸುಪ್ರೀಂಕೋರ್ಟ್ ಆದೇಶದಂತೆ 2013ರ ಪಟ್ಟಿಯಲ್ಲಿರುವ ದೇವಾಲಯಗಳನ್ನು ಮೊದಲು ತೆರವುಗೊಳಿಸಿ ಎಂಬುದು ಸರ್ಕಾರದ ಆದೇಶವಾಗಿದೆ. ಇದಾದ ನಂತರ ಸರ್ಕಾರ ನಿರ್ದೇಶನ ನೀಡಿದರೆ ಮತ್ಯಾವುದೇ ಧರ್ಮದ ಪ್ರಾರ್ಥನಾ ಮಂದಿರಗಳು ಅನಧಿಕೃತವಾಗಿದ್ದರೆ ಅದನ್ನು ತೆರವುಗೊಳಿಸುತ್ತೇವೆ. ಟಿ.ಎಸ್.ಶಿವರಾಜ್, ತಹಸೀಲ್ದಾರ್ ದೊಡ್ಡಬಳ್ಳಾಪುರ ಕೆಲ ಅಧಿಕಾರಿಗಳ ಕಾರ್ಯವೈಖರಿಯಿಂದಾಗಿ ಈ ದಿನ ಹಿಂದುಗಳು ಆತಂಕಪಡುವ ಪರಿಸ್ಥಿತಿ ಉಂಟಾಗಿದೆ. 2009ಕ್ಕಿಂತ ಹಳೆಯ ದೇವಾಲಯಗಳನ್ನು ತೆರವಿನ ಪಟ್ಟಿಗೆ ಹೇಗೆ ಸೇರಿಸಲಾಗಿದೆ. ತಾಲೂಕಿನ ರಸ್ತೆ ಬದಿ ಯಾವುದೇ ಮಸೀದಿ, ಚರ್ಚ್‌ಗಳು ಇಲ್ಲವೇ...? ಈ ಅಧಿಕಾರಿಗಳು ಕೋರ್ಟ್‌ನ ನೆಪ ಹೇಳಿ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಧೋರಣೆ ಬದಲಾಯಿಸಿಕೊಳ್ಳಲಿ. ಎಚ್.ಅಮರನಾಥ್, ಹಿಂದು ಜಾಗರಣಾ ವೇದಿಕೆ ಮಾಜಿ ಜಿಲ್ಲಾಧ್ಯಕ್ಷ ರಾಜಕಾರಣಿಗಳು ದೇವಸ್ಥಾನಗಳ ತೆರವು ವಿಚಾರದಲ್ಲಿ ಜಾಣಕುರುಡು ಮೆರೆದು ಬಹುಸಂಖ್ಯಾತ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡುತ್ತಿದ್ದಾರೆ. ಜಿ.ಎನ್.ಪ್ರದೀಪ್, ಕದಂಬ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ

ನೆಲಮಂಗಲದಲ್ಲಿ 4 ದೇಗುಲ ತೆರವು: ಅನಧಿಕೃತ ದೇಗುಲ, ಚರ್ಚ್, ಮಸೀದಿಗಳನ್ನು ತೆರವುಗೊಳಿಸುವಂತೆ ಆದೇಶವಿದ್ದರೂ ಇದುವರೆಗೆ 4 ದೇವಾಲಯ ತೆರವುಗೊಳಿಸಿರುವುದು ಬಿಟ್ಟರೆ ಮತ್ಯಾವುದೇ ಚರ್ಚ್ ಹಾಗೂ ಮಸೀದಿಗಳ ತೆರವಿಗೆ ಜಿಲ್ಲಾಡಳಿತ ಮುಂದಾಗಿಲ್ಲ ಎಂಬುದು ನೆಲಮಂಗಲ ತಾಲೂಕಿನಲ್ಲಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.

ಶ್ರೀ ತಪಸ್ವಿ ವೀರಾಂಜಿನೇಯ, ಸುಭಾಷ್ ನಗರದ ಭಜನಾಮಂದಿರ, ಲೋಹಿತ್‌ನಗರದ ಅಭಯ ಆಂಜನೇಯಸ್ವಾಮಿ, ತಾವರೆಕೆರೆ ಆಂಜನೇಯಸ್ವಾಮಿ ದೇಗುಲಗಳನ್ನು ತಹಸೀಲ್ದಾರ್ ನೇತೃತ್ವದಲ್ಲಿ ತೆರವುಗೊಳಿಸಿದ್ದು, 16 ಬಾಕಿ ಇವೆ.

ಲೋಹಿತನಗರ ಪಂಚಮುಖಿ ಆಂಜನೇಯ, ಆದರ್ಶ ನಗರದ ಶ್ರೀಮುನೇಶ್ವರ, ಗೋವಿಂದ ಬಡಾವಣೆ ಗಣೇಶ ದೇಗುಲ, ಸುಭಾಷ್‌ನಗರ ಮುನೇಶ್ವರ, ದ್ವಾರಕನಾಥ ಬಡಾವಣೆ ಮುನೇಶ್ವರ, ವೀವರ್ಸ್ ಕಾಲನಿ ವೆಂಕಟರಮಣಸ್ವಾಮಿ, ಅಯ್ಯಪ್ಪಸ್ವಾಮಿ, ತಾಪಂ ಮುಂಭಾಗದ ಭಕ್ತಾಂಜನೇಯ, ಪಂಪ್‌ಹೌಸ್ ವೀರಾಂಜನೇಯ, ರಾಯನನಗರ ಗಣೇಶ ದೇಗುಲ, ದಾದಾಫಿರ್ ಬಡಾವಣೆ ವೆಂಕಟೇಶ್ವರ, ವಿಜಯನಗರ ಶಿವಗಣಪತಿ ದೇಗುಲಗಳು ತೆರವು ಪಟ್ಟಿಯಲ್ಲಿವೆ.

ತೆರವು ತಾತ್ಕಾಲಿಕ ಸ್ಥಗಿತ: ತ್ಯಾಮಗೊಂಡ್ಲು ಹೋಬಳಿ ಮಣ್ಣೆ ಅಭಯ ಆಂಜನೇಯಸ್ವಾಮಿ ದೇವಾಲಯ ಮತ್ತು ಗಣೇಶನ ದೇವಸ್ಥಾನ ತೆರವಿಗೆ ಮುಂದಾಗಿದ್ದ ತಾಲೂಕು ಆಡಳಿತ ಗ್ರಾಮಸ್ಥರ ತೀವ್ರ ವಿರೋಧದಿಂದ ವಾಪಸಾಗಿದ್ದರು. ತಾವರೆಕೆರೆ ಗ್ರಾಮದ ದೇವಸ್ಥಾನವನ್ನು ರಸ್ತೆಗೆ ಅಡ್ಡಿ ಆಗಬಹುದಾಗಿದ್ದ ಮುಂಭಾಗದ 3 ಅಡಿ ತೆರವು ಮಾಡಿ ದೇವಸ್ಥಾನ ಉಳಿಸಿಕೊಳ್ಳಲಾಗಿದೆ.

ಸಾರ್ವಜನಿಕರ ವಿರೋಧದಿಂದ ತಾತ್ಕಾಲಿಕವಾಗಿ ತೆರವು ಕಾರ್ಯ ನಿಲ್ಲಿಸಲಾಗಿದೆ, ಈ ಸಂಬಂಧ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್‌ಗೆ ವರದಿ ನೀಡಲಾಗಿದ್ದು, ಮುಂದಿನ ಆದೇಶದಂತೆ ಕ್ರಮಕೈಗೊಳ್ಳಲಾಗುವುದು ಎಂದು ಉಪತಹಸೀಲ್ದಾರ್ ನಟರಾಜ್ ತಿಳಿಸಿದ್ದಾರೆ.