ಕೆ.ಆರ್.ಪೇಟೆ: ದೇವಾಲಯ ಹಾಗೂ ಶಾಲೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಆಚಾರ-ವಿಚಾರಗಳನ್ನು ಸಂರಕ್ಷಣೆ ಮಾಡುವ ಕೆಲಸವನ್ನು ಮಾಡಬೇಕಾಗಿದೆ ಎಂದು ಬೆಂಗಳೂರು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ಅವರು ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ರಾಯಸಮುದ್ರ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮುನುಷ್ಯ ಎಷ್ಟೇ ಕೋಟಿ ಸಂಪಾದನೆ ಮಾಡಿದರೂ ಸಹ ನೆಮ್ಮದಿಗಾಗಿ ಹಂಬಲಿಸುತ್ತೇನೆ. ಗುಡಿ-ಗೋಪುರಗಳು ಹಾಗೂ ದೇವಾಲಯಗಳಿಗೆ ಭೇಟಿ ನೀಡಿ ದೇವರನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ. ಹಾಗಾಗಿ ನಮ್ಮ ದೇಶದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನರು ನೆಮ್ಮದಿ ಪಡೆದುಕೊಳ್ಳುತ್ತಿದ್ದಾರೆ. ಕೆಲವರು ದೇವರೆಲ್ಲಿದ್ದಾನೆ ಎಂದು ಪ್ರಶ್ನಿಸುತ್ತಾರೆ. ಆದರೆ ಅವರು ತಮ್ಮ ಸಂಕಷ್ಟದ ಸಮಯ, ಮನಸ್ಸಿನ ನೆಮ್ಮದಿಗಾಗಿ ದೇವರ ಮೊರೆ ಹೋಗಿದ್ದನ್ನು ಕಂಡಿದ್ದೇವೆ. ಬಡವರು ಹಾಗೂ ನಿರ್ಗತಿಕರಿಗೆ ದಾನ ಧರ್ಮಗಳನ್ನು ಮಾಡುವುದರಿಂದಲೂ ನೆಮ್ಮದಿ ಪಡೆಯಬಹುದು. ಬಡವರ ಸೇವೆ ಮಾಡುವುದೂ ಸಹ ದೇವರ ಸೇವೆ ಮಾಡಿದಂತೆಯೇ ಆಗುತ್ತದೆ. ಜನರು ತಮ್ಮ ಗ್ರಾಮಗಳಲ್ಲಿರುವ ಶಿಥಿಲಗೊಂಡಿರುವ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿ ನೆಮ್ಮದಿಯ ಜೀವನ ಸಾಗಿಸಲು ಮುಂದಾಗುತ್ತಿದ್ದಾರೆ. ಅದೇ ರೀತಿ ನಮ್ಮ ರಾಯಸಮುದ್ರ ಗ್ರಾಮದ ಜನರು ತಮ್ಮ ಗ್ರಾಮದ ಗ್ರಾಮದೇವತೆ ಶ್ರೀವೀರಭದ್ರೇಶ್ವರ ಸ್ವಾಮೀಯ ದೇವಾಲಯವು ಹತ್ತಾರು ವರ್ಷಗಳ ಕಾಲ ಪಾಳು ಬಿದ್ದು ಪೂಜೆ ಪುನಸ್ಕಾರ ಇಲ್ಲದೆ ಗ್ರಾಮಕ್ಕೆ ಹಲವಾರು ವಿಘ್ನಗಳು ಉಂಟಾಗುತ್ತಿದ್ದವು. ಇದನ್ನು ಮನಗಂಡು ಗ್ರಾಮದ ಮುಖಂಡರು ನಾನು ಪೂರ್ವಾಶ್ರಮದಲ್ಲಿ ಪಾಂಡವಪುರ ಉಪ ವಿಭಾಗಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಶ್ರೀ ವೀರಭದ್ರೇಶ್ವರ ದೇವಾಲಯವನ್ನು ಜೀರ್ಣೋದ್ದಾರ ಮಾಡಲು ಮುಂದೆ ಬಂದರು. ಆಗ ಮುಜರಾಯಿ ಕಮೀಷನರ್ ಬಳಿ ಪರ್ಮಿಷನ್ ಪಡೆದು ಜೀರ್ಣೋದ್ದಾರ ಮಾಡಬೇಕು ಎಂದು ಇಲಾಖೆಯ ಕೆಲ ನೌಕರರು ತಿಳಿಸಿದ್ದರು. ಆದರೆ ತಾವು ಕಮೀಷನರ್ ಬಳಿ ಹೋಗುವುದು ಬೇಡಿ, ಜೀರ್ಣೋದ್ದಾರ ಮಾಡುವಂತೆ ಲಿಖಿತವಾಗಿ ಅವಕಾಶ ಕಲ್ಪಿಸಿದ್ದೆ. ಇದರ ಪರಿಣಾಮವಾಗಿ ದೇವಾಲಯವು ಸುಂದರವಾಗಿ ಜೀರ್ಣೋದ್ಧಾರಗೊಂಡು ಉದ್ಘಾಟನೆ ಆಗಿರುವುದು ನನಗೆ ಹೆಚ್ಚು ಸಂತಸವಾಗಿದೆ ಎಂದು ಶ್ರೀ ನಿಶ್ಚಲಾನಂದ ಶ್ರೀಗಳು ತಿಳಿಸಿದರು.
ಶಾಸಕ ಎಚ್.ಟಿ.ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾನು ಇದುವರೆಗೂ ರಾಯಸಮುದ್ರ ಗ್ರಾಮದ ಅಭಿವೃದ್ಧಿಗೆ ಸುಮಾರು 4 ಕೋಟಿ ರೂ.ಗಳನ್ನು ನೀಡಿದ್ದೇನೆ. ಇನ್ನೂ ಹೆಚ್ಚು ಅನುದಾನ ನೀಡುವ ಮೂಲಕ ರಾಯಸಮುದ್ರ ಗ್ರಾಮದ ಸಮಗ್ರ ಅಭಿವೃದ್ಧಿಗೆ ಸದಾ ಸಿದ್ಧವಿದ್ದೇನೆ ಎಂದು ಶಾಸಕರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಮನ್‌ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ.ಹರೀಶ್, ನಿವೃತ್ತ ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾವ್ಯಾ ಚಂದ್ರು, ಮಾಜಿ ಅಧ್ಯಕ್ಷ ಆರ್.ಕೆ.ಯೋಗೇಶ್, ದೇವಾಲಯದ ಜೀರ್ಣೋದ್ಧಾರ ಟ್ರಸ್ಟ್ ಅಧ್ಯಕ್ಷ ಡಾ.ವೆಂಕಟೇಶ್, ಉಪಾಧ್ಯಕ್ಷ ಆರ್.ಕೆ.ನಾಗರಾಜು, ಪೊಲೀಸ್ ಇನ್‌ಸ್ಪೆಕ್ಟರ್ ಮಂಜೇಗೌಡ, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಪಾಪೇಗೌಡ, ಜಿಪಂ ಮಾಜಿ ಅಧ್ಯಕ್ಷ ಆರ್.ಕೆ.ಕುಮಾರ್, ತಾಪಂ ಮಾಜಿ ಅಧ್ಯಕ್ಷ ಮೆಣಸ ಮಹದೇವೇಗೌಡ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಮಹಾದೇವ್, ಟಿಎಪಿಸಿಎಂಎಸ್ ನಿರ್ದೇಶಕರಾದ ಮಲ್ಲೇನಹಳ್ಳಿ ಎಂ.ಮೋಹನ್, ನಾಗರಘಟ್ಟ ದಿಲೀಪ್‌ಕುಮಾರ್, ಎಚ್.ಟಿ.ಲೋಕೇಶ್, ಹರಳಹಳ್ಳಿ ಸೊಸೈಟಿ ಅಧ್ಯಕ್ಷ ಈರೇಗೌಡ, ಗ್ರಾಪಂ ಸದಸ್ಯರಾದ ಆರ್.ಕೆ.ಯೋಗೇಶ್, ಕುಮಾರಚಾರ್, ಶೋಭಗಣೇಶಾಚಾರ್, ನಾಗಮ್ಮ ಶಿವರಾಮೇಗೌಡ, ಉಮಾ ವೆಂಕಟೇಶ್, ಸೊಟೈಟಿ ನಿರ್ದೇಶಕ ಪ್ರೇಮಕುಮಾರ್, ಮಂಜುಳನಾಗೇಶಾಚಾರ್, ತಿಮ್ಮಯ್ಯ, ಮುಖಂಡರಾದ ಮೂಡ್ಲೀಗೌಡ, ಪಾಪೇಗೌಡ, ಮುದ್ದೆಗೌಡ, ಜವರೇಗೌಡ, ನಿಂಗೇಗೌಡ, ನಂಜೇಗೌಡ, ಬೋರೇಗೌಡ, ಡೇರಿ ಅಧ್ಯಕ್ಷ ಹರೀಶ್ ಮತ್ತು ನಿರ್ದೇಶಕರು ಗ್ರಾಮದ ಮುಖಂಡರು ಭಕ್ತಾದಿಗಳು ಇದ್ದರು.