ಹಾಸನ: ನ.2ರಿಂದ ಆರಂಭವಾಗಲಿರುವ ಹಾಸನಾಂಬ ಜಾತ್ರಾ ಮಹೋತ್ಸವದ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿ ಶೀಘ್ರದಲ್ಲಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಶಾಸಕ ಎಚ್.ಪಿ.ಸ್ವರೂಪ್ ಸೂಚನೆ ನೀಡಿದರು.
ದೇವಾಲಯಕ್ಕೆ ಸೋಮವಾರ ಬೆಳಿಗ್ಗೆ ಉಪ ವಿಭಾಗಾಧಿಕಾರಿಯೊಂದಿಗೆ ಭೇಟಿ ಜಾತ್ರಾ ಮಹೋತ್ಸವದ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆಗೆ ಅರ್ಚಕರು ಪೂಜೆ ನೆರವೇರಿಸಿದ್ದಾರೆ. ಇಂದಿನಿಂದಲೇ ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡಿ, ಅವರನ್ನು ಸ್ವಾಗತಿಸುವ ಕಾರ್ಯ ಶುರುವಾಗಲಿದೆ. ನ.2ರಿಂದ ನ.15ರವರೆಗೆ ಈ ಬಾರಿಯ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ತಿಳಿಸಿದರು.
ಹಾಸನಾಂಬೆ ದರ್ಶನಕ್ಕೆ ಈ ಬಾರಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಬರುವ ಭಕ್ತಾದಿಗಳಿಗೆ 24 ಗಂಟೆ ದೇವಿ ದರ್ಶನ ಹಾಗೂ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ದೇವಾಲಯದ ಒಳ ಹೊರಗೆ ಸುಣ್ಣ ಬಣ್ಣ ಹಚ್ಚುವ ಕಾರ್ಯ ಮುಗಿದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಹಾಗೂ ದೇವಸ್ಥಾನದ ಆಡಳಿತಾಧಿಕಾರಿ ಮಾರುತಿ, ಒಕ್ಕಲಿಗರ ಸಂಘದ ನಿರ್ದೇಶಕ ಸುಮುಖ ರಘುಗೌಡ, ನಗರಸಭೆ ಸದಸ್ಯ ಚಂದ್ರೇಗೌಡ, ನಗರಸಭೆ ಇಂಜಿನಿಯರ್ ಆನಂದ್ ಇತರರು ಇದ್ದರು.
ಅನುದಾನ ನೀಡ ಹಿನ್ನೆಲೆ ಸ್ವರೂಪ್ ಅಸಮಾಧಾನ:
ರಾಜ್ಯ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳಿಂದ ಅನೇಕ ಅಭಿವೃದ್ಧಿ ಯೋಜನೆಗಳು ಕುಂಠಿತಗೊಂಡಿದ್ದು, ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುತ್ತಿಲ್ಲ ಎಂದು ಶಾಸಕ ಎಚ್.ಪಿ.ಸ್ವರೂಪ್ ಅಸಮಾಧಾನ ವ್ಯಕ್ತಪಡಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ.2 ರಂದು ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲಿದೆ. ಇದಕ್ಕೂ ಮುಂಚೆಯೇ ಬಹುನಿರೀಕ್ಷಿತ ಹಾಸನದ ಫ್ಲೈಓವರ್ ಉದ್ಘಾಟನೆ ಆಗಲಿದೆ ಎನ್ನುವ ನಿರೀಕ್ಷೆ ಇತ್ತು. ಆದರೀಗ ಅದು ಹುಸಿಯಾಗಿದೆ. ಅಭಿವೃದ್ಧಿ ಬಹಳ ಕುಂಠಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿವಿಧ ಕಾಮಗಾರಿಗಳಿಗೆ ಹಾಗೂ ಇಲಾಖೆಗೆ ಅನುದಾನ ಕೊಡುವುದು ಕಡಿಮೆಯಾಗಿದೆ. ನಾನು ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿದ್ದೇನೆ. ಅಭಿವೃದ್ಧಿ ವಿಚಾರವಾಗಿ ಸಚಿವರನ್ನು ಭೇಟಿ ಮಾಡಿದ್ದು, ಅವರು ಸದ್ಯ ಯಾವುದೇ ಹಣ ಇಲ್ಲಾ ಎಂದು ಹೇಳುತ್ತಿದ್ದಾರೆ ಎಂದರು.
ಶಾಸಕರ ನಿಧಿ 50 ಲಕ್ಷ ರೂ. ಬಂದಿದೆ ಎಂದು ಹೇಳುತ್ತಿದ್ದಾರೆ. ಆದರೆ ಅದು ಕೂಡ ಬಂದಿಲ್ಲ. ಲೋಕಸಭಾ ಚುನಾವಣೆ ಗುರಿಯಾಗಿಟ್ಟುಕೊಂಡು ಐದು ಗ್ಯಾರಂಟಿಗಳ ಹೆಸರಿನಲ್ಲಿ ಜನಗಳ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ಗ್ಯಾರಂಟಿಗಳಿಂದ ಅಭಿವೃದ್ಧಿಯಲ್ಲಿ ಬಹಳಷ್ಟು ಹಿಂದೆ ಉಳಿದಿದ್ದೇವೆ. ಮುಂದಿನ ದಿನಗಳಲ್ಲಿ ಅಧಿವೇಶನ ಸಂದರ್ಭದಲ್ಲಿ ಮತ್ತೊಮ್ಮೆ ಸಚಿವರನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ. ಹಬ್ಬ ಕಳೆದುಕೊಂಡು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ನೇತೃತ್ವದಲ್ಲಿ ಎಲ್ಲಾ ಸಚಿವರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.