ಜಿಲ್ಲೆ

ದೇವಸ್ಥಾನದ ಜತೆ ಬೆಟ್ಟಗಳನ್ನು ರಕ್ಷಿಸಿ, ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಎನ್. ರಾಮ್ ಕಿವಿಮಾತು

ನೆಲಮಂಗಲ: ಇತಿಹಾಸ ಪ್ರಸಿದ್ಧ ದೇವಾಲಯಗಳು, ಸ್ಮಾರಕಗಳಲ್ಲದೆ ಬೆಟ್ಟಗಳನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಗ್ರಾಮಾಂತರ ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಎನ್. ರಾಮ್ ತಿಳಿಸಿದರು.

ನಗರದ ಚನ್ನಪ್ಪ ಬಡಾವಣೆಯ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಭಕ್ತರು ಬುಧವಾರ ಆಯೋಜಿಸಿದ್ದ ಹನುಮ ಮಾಲೆ ಧಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

800 ವರ್ಷಕ್ಕೂ ಹೆಚ್ಚಿನ ಇತಿಹಾಸ ಇರುವ ತಾಲೂಕಿನ ನಿಜಗಲ್ಲು ಸಿದ್ಧರಬೆಟ್ಟದಲ್ಲಿ 19ಕ್ಕೂ ಹೆಚ್ಚು ದೇವಾಲಯಗಳಿವೆ. ರಾಜರಕಾಲದ ಕುದುರೆ ಲಾಯ, ಗರಡಿ ಮನೆ, ಕಾವಲು ಗೋಪುರ, ರಾಣಿ ಅರಮನೆ, ನೀರಿನ ಕೊಳದ ಜತೆಗೆ ಉತ್ತಮ ಪರಿಸರ ಇದೆ. ಇದನ್ನು ರಕ್ಷಿಸಿ, ಪ್ರವಾಸಿ ತಾಣವನ್ನಾಗಿ ಪರಿವರ್ತಿಸಬೇಕಿದೆ ಎಂದರು.

ಇದಕ್ಕಾಗಿ ದೇವಾಲಯ ಸಮಿತಿಯನ್ನು ರಚಿಸಲಾಗಿದೆ. ಡಿ.16ರಂದು ನೆಲಮಂಗಲದಿಂದ ದಾಬಸ್‌ಪೇಟೆ ಬಳಿಯ ಸಿದ್ಧರಬೆಟ್ಟಕ್ಕೆ 500ಕ್ಕೂ ಹೆಚ್ಚು ಮಂದಿಯ ತಂಡ ಹನುಮ ಜಯಂತಿ ಪ್ರಯುಕ್ತ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ತಾಲೂಕಿನಲ್ಲಿ ಇರುವ ಐತಿಹಾಸಿಕ ಸ್ಥಳಗಳನ್ನು ಗುರುತಿಸುವ ಜತೆಗೆ ಇತಿಹಾಸವನ್ನು ಸಾರ್ವಜನಿಕರಿಗೆ ತಿಳಿಸಬೇಕಿದೆ. ಇದಕ್ಕಾಗಿ ಕರಪತ್ರಗಳನ್ನು ಹಂಚಲಾಗುವುದು ಎಂದು ಹೇಳಿದರು.

ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಕರಪತ್ರವನ್ನು ಬಿಡುಗಡೆ ಮಾಡಿದರು. ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿಜಯ್‌ಕುಮಾರ್, ಕಾರ್ಯದರ್ಶಿ ಅರಣ್‌ಕುಮಾರ್, ವಿಶ್ವ ಹಿಂದು ಪರಿಷತ್ ತಾಲೂಕು ಸಂಯೋಜಕ ಅಂಬರೀಶ್ ಪಾಟೀಲ್, ಆರ್‌ಎಸ್‌ಎಸ್ ಕಾರ್ಯವಾಹ ವೀರಭದ್ರಪ್ಪ, ಮಾಧ್ಯಮಪ್ರಮುಖ್ ಜಯಂತ್ ಮತ್ತಿತರರು ಇದ್ದರು.