ಸೊರಬ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿತ ಆರೋಪಿಯಿಂದ ದೇವಸ್ಥಾನಗಳಲ್ಲಿ ಕಳವು ಮಾಡಿದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿರುವುದು. 
ಜಿಲ್ಲೆ

ದೇವಸ್ಥಾನಗಳ ಒಡವೆ ಕಳವು ಆರೋಪಿ ಬಂಧನ

ಸೊರಬ: ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸೊರಬ ಪೊಲೀಸರು ಯಶಸ್ವಿಯಾಗಿದ್ದಾರೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದ ಕೆ.ಸಂದೀಪ ಕರಿಬಸಪ್ಪ ಬಂಧಿತ ಆರೋಪಿ.

ಪಟ್ಟಣದ ಪುರಸಭೆ ಮುಂಭಾಗದಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಕಂಡು ಓಡಲು ಯತ್ನಿಸಿದ್ದಾನೆ. ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ದೇವಸ್ಥಾನಗಳ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ.

ಇತ್ತೀಚೆಗೆ ಕಡಸೂರು ಗ್ರಾಮದ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಕಳ್ಳತನವಾದ ಬಗ್ಗೆ ದೂರು ದಾಖಲಾಗಿತ್ತು. ಬಂಧಿತ ಆರೋಪಿಯಿಂದ ಸುಮಾರು ನಾಲ್ಕು ಲಕ್ಷ ರೂ. ಮೌಲ್ಯದ 36 ಗ್ರಾಂ ಬಂಗಾರದ ಒಡವೆಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಾಗರ ತಾಲೂಕಿನ ಯಲಕುಂದ್ಲಿ ಗ್ರಾಮದ ರಾಚಮ್ಮ ದೇವಸ್ಥಾನ, ದಿಗಟೆಕೊಪ್ಪ ಗ್ರಾಮದ ಚೌಡಮ್ಮ ದೇವಸ್ಥಾನ, ಶಿರೂರು - ಆಲಳ್ಳಿ ಗ್ರಾಮದ ಯಕ್ಷಾಂಬ ದೇವಸ್ಥಾನ, ಬಲೆಗಾರು ಗ್ರಾಮದ ಶ್ರೀ ರೇಣುಕಾಂಬ ದೇವಸ್ಥಾನ, ಮರತ್ತೂರು ಗ್ರಾಮದ ದುರ್ಗಮ್ಮ ದೇವಸ್ಥಾನ ಹಾಗೂ ಕಾರ್ಗಲ್ ಠಾಣಾ ವ್ಯಾಪ್ತಿಯ ಹೊಸಕೊಪ್ಪ ಗ್ರಾಮದ ಕೋಟೇಶ್ವರ ದೇವಸ್ಥಾನಗಳಲ್ಲಿ ಕಳವು ಮಾಡಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.

ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್‌ಪಿಗಳಾದ ಬಿ.ರಮೇಶ್, ಕಾರಿಯಪ್ಪ, ಶಿಕಾರಿಪುರ ಡಿವೈಎಸ್‌ಪಿ ಕೆ.ಇ.ಕೇಶವ, ಸಿಪಿಐ ಮಹಾಂತೇಶ ಕೆ.ಲಂಬಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಎಂ.ಎಚ್.ನವೀನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಸಿಬ್ಬಂದಿ ನಾಗೇಶ್, ರಾಜುನಾಯ್ಕ, ಆರ್.ಗಿರೀಶ್, ರಾಘವೇಂದ್ರ, ಲೋಕೇಶ್, ವಿನಯ, ಗಿರೀಶ್, ಹನುಮಂತ, ಮಲ್ಲೇಶ್, ಕೆ.ಎನ್. ಶಶಿಧರ, ಸಂದೀಪ, ಸೋಮಶೇಖರ, ಉಮೇಶ್, ಕಿರಣ್, ಮೋಹನ್, ರವೀಂದ್ರ, ಹೇಮಲತಾ, ರೂಪಾಲಿ ಪಾಲ್ಗೊಂಡಿದ್ದರು.