ಸಿರಿಗೇರಿ: ದೇವಸ್ಥಾನಗಳಲ್ಲಿ ದೇವರ ಮೂರ್ತಿಗಳಿಗೆ ಆಭರಣಗಳನ್ನು ಪೂಜಾ ಸಮಯದಲ್ಲಿ ಅವಶ್ಯವಿದ್ದಾಗ ಹಾಕಿ ನಂತರ ತೆಗೆದಿಡಬೇಕೆಂದು ಪಿಎಸ್‌ಐ ವೈ.ಶಶಿಧರ ನಾಯಕ ಸೂಚಿಸಿದರು.
ಗ್ರಾಮದ ಠಾಣೆಯಲ್ಲಿ ಸಿರಿಗೇರಿ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿನ ದೇವಸ್ಥಾನಗಳ ಅರ್ಚಕರು, ಆಡಳಿತ ಮಂಡಳಿ ಪದಾಧಿಕಾರಿಗಳು, ಸಿಬ್ಬಂದಿ ಸಭೆಯಲ್ಲಿ ಶನಿವಾರ ಮಾತನಾಡಿದರು. ದೇವಸ್ಥಾನದಲ್ಲಿ ಕಾವಲುಗಾರನನ್ನು ನೇಮಕ ಮಾಡಿಕೊಳ್ಳುವುದರೊಂದಿಗೆ ಸಿಸಿ ಕ್ಯಾಮರಾ ಅಳವಡಿಸಬೇಕು. ಸೂಕ್ತ ಬೆಳಕಿನ ಮಾಡಬೇಕು. ಹುಂಡಿಯಲ್ಲಿನ ಹಣವನ್ನು ಏಳು ದಿನಕ್ಕೊಮ್ಮೆ ತೆಗೆದು ಬ್ಯಾಂಕಿನಲ್ಲಿಡಬೇಕು ಇಲ್ಲವೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ತಾಕೀತು ಮಾಡಿದರು.
ಕೆಲ ಅರ್ಚಕರು ಮಾತನಾಡಿ, ಸಿಸಿ ಕ್ಯಾಮರಾ ಒಡೆದು ಹಾಕಿ ಕಳ್ಳತನ ಮಾಡಲಾಗಿದೆ. ಬೆಳಗ್ಗೆ ಪೂಜಾ ಕೈಂಕರ್ಯ ಮುಗಿದ ನಂತರ ನಾವು ಬೇರೆಡೆ ಕೆಲಸಕ್ಕೆ ತೆರಳಿದಾಗ ಕಳ್ಳತನ ನಡೆಯುತ್ತಿವೆ. ಅಂಬಮ್ಮ ದೇವಿಯ ಹಿತ್ತಾಳೆ ಮೂರ್ತಿ ಕಳ್ಳತನವಾಗಿದೆ ಎಂದರು.
ದೇವಸ್ಥಾನದಲ್ಲಿ ಗುಣಮಟ್ಟದ ಕೀಲಿ ಅಳವಡಿಸಿಕೊಳ್ಳಬೇಕು. ಕಾಂಪೌಂಡ್ ಹಾಗೂ ಗೇಟ್ ನಿರ್ಮಿಸಿಕೊಳ್ಳಿ. ಗ್ರಾಪಂ ಮೂಲಕ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ನಮ್ಮ ಸಿಬ್ಬಂದಿ ಗಸ್ತು ತಿರುಗಲಿದ್ದಾರೆ ಎಂದು ಪಿಎಸ್‌ಐ ಶಶಿಧರ ನಾಯಕ ತಿಳಿಸಿದರು.