ತುಮಕೂರು: ಗುಬ್ಬಿ, ಕುಣಿಗಲ್ ತಾಲೂಕುಗಳಲ್ಲಿ ಊರ ಹೊರಗಿನ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಬಾಗಿಲು ಮುರಿದು ಹುಂಡಿ ದೋಚುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಜೂ.4ರಂದು ಗುಬ್ಬಿ ತಾಲೂಕು ಸಿ-ಕೊಡಗೇಹಳ್ಳಿಯ ಕೋಡಿಕೆಂಪಮ್ಮ ದೇವಸ್ಥಾನದ ಬಾಗಿಲ ಬೀಗ ಮುರಿದು ದೇವಸ್ಥಾನದ ಹುಂಡಿ ಕದ್ದೊಯಲು ಯತ್ನಿಸಿ ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದ ಮೂವರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಕಾರೇಹಳ್ಳಿ ಮಜರೆ ಬೊಮ್ಮನಹಳ್ಳಿಯ ನರಸಿಂಹಮೂರ್ತಿ(21), ನಾಗರಾಜ(18) ಹಾಗೂ ಇವರೊಂದಿಗೆ ಕಾನೂನು ಸಂರ್ಷಕ್ಕೆ ಒಳಗಾದ ಬಾಲಕ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಆರೋಪಿಗಳು ಗೂಗಲ್ ಮ್ಯಾಪ್ ಲೊಕೇಶನ್ನಲ್ಲಿ "ನಿಯರೆಸ್ಟ್ ಟೆಂಪಲ್' ಎಂದು ಸರ್ಚ್ ಮಾಡಿ ಊರುಗಳಿಂದ ಹೊರಗಡೆ ಒಂಟಿಯಾಗಿರುವ ದೇವಾಲ ಯಗಳಿಗೆ ದಾಳಿ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಸಿ.ಎಸ್.ಪುರ, ಗುಬ್ಬಿ ಮತ್ತು ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ 8 ಪ್ರಕರಣಗಳನ್ನು ಒಪ್ಪಿಕೊಂಡಿದ್ದಾರೆ.