ಗುಂಡ್ಲುಪೇಟೆ: ತಾಲೂಕಿನ ಸೀಗೆವಾಡಿ ಗ್ರಾಮದಲ್ಲಿರುವ ಪುರಾತನ ಚೆಲುವನಾರಾಯಣಸ್ವಾಮಿ ದೇವಸ್ಥಾನ ನೆಲಸಮಕ್ಕೆ ಮಹಿಳೆ ಮುಂದಾಗಿದ್ದರು ಎಂದು ಆರೋಪಿಸಿ ಆಕೆಯ ವಿರುದ್ಧ ಹಿಂದು ಸಂಘಟನೆಯ ಪದಾಧಿಕಾರಿಗಳು ಪೊಲೀಸರಿಗೆ ಬುಧವಾರ ದೂರು ನೀಡಿದ್ದಾರೆ.
ಗ್ರಾಮದಲ್ಲಿ ಜಮೀನು ಹೊಂದಿರುವ ಸುಜಾತಾ ಎಂಬುವರು ತಮ್ಮ ಜಮೀನಿನ ಬಳಿ ಇರುವ ಸರ್ಕಾರಿ ಖರಾಬು ಜಾಗಕ್ಕೆ ಬೇಲಿ ಹಾಕುವ ಸಲುವಾಗಿ ಭಾನುವಾರ ಖರಾಬು ಭೂಮಿಯಲ್ಲಿದ್ದ ಚೆಲುವನಾರಾಯಣಸ್ವಾಮಿ ದೇವಾಲಯವನ್ನು ತೆರವುಗೊಳಿಸಲು ಮುಂದಾಗಿದ್ದರು. ಸ್ಥಳೀಯರ ವಿರೋಧವನ್ನು ಲೆಕ್ಕಿಸದೆ ಜೆಸಿಬಿಯಿಂದ ದೇವಾಲಯದ ಹೊರಭಾಗದಲ್ಲಿದ್ದ ನಾಗರಕಲ್ಲು ಹಾಗೂ ವೀರಕಲ್ಲುಗಳನ್ನು ನಾಶಪಡಿಸಿದ್ದರು.
ಈ ವೇಳೆ ತೀವ್ರ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು ತಹಸೀಲ್ದಾರ್ ಅವರ ಗಮನಕ್ಕೆ ತಂದರು. ವಿಷಯ ತಿಳಿದ ಕೂಡಲೇ ಬೇಗೂರು ನಾಡಕಚೇರಿಯ ರಾಜಸ್ವ ನಿರೀಕ್ಷಕ ರವಿ ಹಾಗೂ ಕಂದಾಯಾಧಿಕಾರಿ ಮಹದೇವಪ್ಪ ಸ್ಥಳಕ್ಕೆ ತೆರಳಿ ನೆಲಸಮ ಕಾಮಗಾರಿಗೆ ತಡೆಯೊಡ್ಡಿದರು.
ಈ ಬಗ್ಗೆ ಗ್ರಾಮಸ್ಥರು ಹಿಂದು ಜಾಗರಣಾ ವೇದಿಕೆಯ ನೆರವು ಕೋರಿದ್ದ ಹಿನ್ನೆಲೆಯಲ್ಲಿ ದಕ್ಷಿಣ ಪ್ರಾಂತ್ಯ ಸಹಸಂಚಾಲಕ ಲೋಹಿತ್ ಅರಸ್ ನೇತೃತ್ವದಲ್ಲಿ ಕಾರ್ಯಕರ್ತರು ಬುಧವಾರ ಗ್ರಾಮಕ್ಕೆ ತೆರಳಿ ಪರಿಶೀಲಿಸಿದರು. ನಂತರ ಬೇಗೂರು ಠಾಣೆಯಲ್ಲಿ ಸುಜಾತಾ ಹಾಗೂ ಸ್ಮಾರಕಗಳನ್ನು ನಾಶಪಡಿಸಿದ ಜೆಸಿಬಿ ಚಾಲಕನ ವಿರುದ್ಧ ದೂರು ನೀಡಿದರು.
ವೇದಿಕೆಯ ಜಿಲ್ಲಾ ಸಂಚಾಲಕ ಕೆಬ್ಬೇಪುರ ನಂದೀಶ್, ಸಹ ಸಂಚಾಲಕ ಗುಂಡ್ಲುಪೇಟೆ ನಂದೀಶ್, ಕಾರ್ಯಕರ್ತರಾದ ವಿಶ್ವ, ನಂಜುಂಡಸ್ವಾಮಿ, ಪ್ರತಾಪ್, ಸೀಗೆವಾಡಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.