ಜಿಲ್ಲೆ

ದೇವಸ್ಥಾನ ಅಭಿವೃದ್ಧಿಗೆ ಶಾಸಕ ಅಡ್ಡಿ

ಟಿ.ಎಚ್.ಸಂತೋಷ್ ಕುಮಾರ್

ರಿಪ್ಪನ್‌ಪೇಟೆ: ದೇವಸ್ಥಾನಕ್ಕೆ ತಾನೂ ಅನುದಾನ ತರದೆ, ಮಂಜೂರಾದ ಅನುದಾನ ಬಿಡುಗಡೆಗೂ ತೊಂದರೆ ಮಾಡುತ್ತ ಶಾಸಕ ಗೋಪಾಲಕೃಷ್ಣ ಬೇಳೂರು ಅಮ್ಮನಘಟ್ಟ ದೇವಸ್ಥಾನದ ಅಭಿವೃದ್ಧಿಗೆ ಅಡ್ಡಿಯಾಗಿದ್ದಾರೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಆರೋಪಿಸಿದರು.

ಜೇನುಕಲ್ಲಮ್ಮ ದೇವಿ ಮತ್ತು ಇಲ್ಲಿನ ಘಟ್ಟ ಈ ಭಾಗದ ಜನರ ಶ್ರದ್ಧಾ ಕೇಂದ್ರ. ಭಕ್ತರ ಅನುಕೂಲಕ್ಕಾಗಿ ಅಭಿವೃದ್ಧಿ ಪಡಿಸುವುದು ನಮ್ಮ ಜವಾಬ್ದಾರಿ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾನು ಶಾಸಕನಾಗಿದ್ದಾಗ 2022ರ ಡಿ.7ರಂದು ಸರ್ಕಾರಕ್ಕೆ ಅನುದಾನ ಕೋರಿ ಪತ್ರ ಬರೆದ ಹಿನ್ನೆಲೆಯಲ್ಲಿ 2023ರ ಜ.4ರಂದು ಜೇನುಕಲ್ಲಮ್ಮ ದೇವಿ ಸಮುದಾಯ ಭವನ ನಿರ್ಮಾಣಕ್ಕೆ ಕರ್ನಾಟಕ ನಿರಾವರಿ ನಿಗಮದಿಂದ 1 ಕೋಟಿ ರೂ. ಅನುದಾನ ಮಂಜೂರಾಗಿದೆ. ಕಟ್ಟಡ ನಿರ್ಮಾಣದ ಹೊಣೆಯನ್ನು ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿತ್ತು. ಅಕಾರಿಗಳು ಕಾಮಗಾರಿಗೆ ಚಾಲನೆ ನೀಡುವ ಸಂದರ್ಭ ಶಾಸಕ ಗೋಪಾಲಕೃಷ್ಣ ಬೇಳೂರು ಕಾಮಗಾರಿ ಅನುಷ್ಠಾನ ಅಕಾರಿಗಳನ್ನು ಬದಲಾವಣೆ ಮಾಡುವಂತೆ ಪತ್ರ ಬರೆದು ತಡೆದಿದ್ದಾರೆ ಎಂದು ದೂರಿದರು.

ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಸ್ವಾಮಿರಾವ್ ಮಾತನಾಡಿ, ದೇವಸ್ಥಾನದ ಅಭಿವೃದ್ಧಿಗೆ ಅನುದಾನ ಬಿಡುಗಡೆಗಾಗಿ 26 ಬಾರಿ ಸ್ವಂತ ಖರ್ಚಿನಲ್ಲಿ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಅಕಾರಿಗಳನ್ನು ಅಂಗಲಾಚಿದ್ದೇನೆ. ಇಂದಿಗೂ ನಯಪೈಸೆ ಬಿಡುಗಡೆಯಾಗಿಲ್ಲ. ಆದರೂ ಭಕ್ತರ ಸಹಕಾರದಿಂದ ದೇವಸ್ಥಾನ ಪೂರ್ಣಗೊಳಿಸಿದ್ದೇವೆ. ಜನಸ್ಪಂದನೆಯಿರದ ದೇವರ ವಿರೋ, ಜನವಿರೋ ಸರ್ಕಾರವಿದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮತ್ತಿಮನೆ ಸುಬ್ರಹ್ಮಣ್ಯ, ಮನೋಧರ, ಆರ್.ಟಿ.ಗೋಪಾಲ, ಎನ್.ಸತೀಶ್, ಹಾಲಗದ್ದೆ ಉಮೇಶ, ಕಿರಣ್, ದೇವೇಂದ್ರಪ್ಪ, ಜ್ಯೋತಿ, ಸುಮಾ, ಸುಧಾಕರ, ಮೋಹನ ಇತರರಿದ್ದರು.