ಜಿಲ್ಲೆ

ದೇವರು, ಭಕ್ತರ ನಡುವೆ ದಲ್ಲಾಳಿ ಇರದಿರಲಿ

ಲೋಕೇಶ್ ಮನು. ಡಿ

ಶ್ರೀರಂಗಪಟ್ಟಣ: ದೇವರು ಮತ್ತು ಭಕ್ತರ ನಡುವೆ ದಲ್ಲಾಳಿ ಇರಬಾರದು, ದೇಹದ ಅಂಗಾಂಗಗಳಲ್ಲೇ ಬಲಗೈ ಶ್ರೇಷ್ಠ, ಎಡಗೈ ಕನಿಷ್ಠ ಎಂಬ ತಾರತಮ್ಯ ಹುಟ್ಟಿಸುತ್ತಿರುವ ಮೂಢನಂಬಿಕೆ ಹೊಂದಿರುವ ವೈದಿಕ ಧರ್ಮದಿಂದ ಬಸವ ಭಕ್ತರು ದೂರ ಇರಬೇಕು ಎಂದು ಕುಂಬಳಗೂಡು ಮಠ ಪೀಠಾಧ್ಯಕ್ಷ ಡಾ.ಶ್ರೀಚೆನ್ನಬಸವಾನಂದ ಸ್ವಾಮೀಜಿ ಸಲಹೆ ನೀಡಿದರು.


ಪಟ್ಟಣದ ಸಂಗಮೇಶ್ವರ ದೇವಾಲಯದ ಅವರಣದಲ್ಲಿ ಬುಧವಾರ ಬಸವ ತತ್ವದ ಜನಜಾಗೃತಿ ಸಂಘಟನೆಗಳು ಆಯೋಜಿಸಿದ್ದ ಬಸವ ತತ್ವಗಳ ಜನಜಾಗೃತಿ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು.


ಬಸವಣ್ಣನವರು ಗಂಡು, ಹೆಣ್ಣು ಎಂಬ ಭೇದವಿಲ್ಲದೆ, ಸಮಾನತೆಯನ್ನು ಜಾತಿ, ಧರ್ಮ, ವರ್ಗರಹಿತವಾದ ಸಮಾಜವನ್ನು ನಿರ್ಮಿಸಿದರು. ತುಳಿತಕ್ಕೆ ಒಳಗಾದ ಜನರನ್ನ್ನು ಮೇಲೆತ್ತುವ ಕೆಲಸವನ್ನು 12ನೇ ಶತಮಾನದಲ್ಲಿ ಮಾಡಿದ ಅವರು, ಕಾಯಕ ಸಮಾಜಗಳ ಜನರನ್ನ್ನು ಮೇಲೆತ್ತುವ ಕೆಲಸ ಮಾಡಿದರು. ಆ ಕಾಲದಲ್ಲಿ ಮಾಡಿ ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿರುವುದನ್ನು ಎಲ್ಲರೂ ಸ್ಮರಿಸಬೇಕು ಎಂದರು.


ಬಸವಣ್ಣ, ಬಸವಾದಿ ಶರಣರ ಆದರ್ಶಗಳನ್ನು ಎಲ್ಲರೂ ಪಾಲನೆ ಮಾಡಬೇಕು. ದೇವನೊಬ್ಬ ನಾಮ ಹಲವು ಎಂಬ ಮಾತಿನಂತೆ 330 ಕೋಟಿ ದೇವರನ್ನು ಪೂಜಿಸುವ ಬದಲು ವಿಶ್ವ ಆಕಾರವಾಗಿರುವ ಸೃಷ್ಟಿಕರ್ತ, ಲಿಂಗ ದೇವನನ್ನು ಪೂಜಿಸಬೇಕು. ಲಿಂಗ ಯೋಗವನ್ನು ಮಾಡುವುದರಿಂದ, ಸರ್ವ ಶಕ್ತಿಯೂ ದೊರೆಯುತ್ತದೆ. ಈಗಿನ ಅನೇಕ ಸ್ವಾಮೀಜಿಗಳು ಪುರೋಹಿತರ ರೀತಿ ವೈದಿಕ ಧರ್ಮವನ್ನು ಹಿಡಿದುಕೊಂಡು ಶಾಸ್ತ್ರ ಹೋಮ-ಹವನ ಮಾಡಿಕೊಂಡು ಧರ್ಮದ ಮಹತ್ವವನ್ನ್ನು ಮರೆತ್ತಿದ್ದಾರೆ. ಬಸವಾದಿ ಶರಣರ ವಿಚಾರಗಳನ್ನುಜನತೆಗೆ ಮುಟ್ಟಿಸುವಲ್ಲಿ ವಿಫಲರಾಗುತ್ತಿದ್ದಾರೆ. ವೈದಿಕ ಧರ್ಮಶಾಸ್ತ್ರ ಹೋಮಗಳೆಂಬ ಮೂಢನಂಬಿಕೆಗಳಿಂದ ಜನರು ದೂರವಿರಬೇಕು ಎಂದರು.


ಶರಣ ಕ್ಷೇತ್ರ ಯಡಿಯೂರು ಸಿದ್ಧ್ದಲಿಂಗೇಶ್ವರ ಶ್ರೀಕ್ಷೇತ್ರದಿಂದ ಶ್ರೀರಂಗಪಟ್ಟಣಕ್ಕೆ ಆಗಮಿಸಿದ ಬಸವ ಜ್ಯೋತಿಯನ್ನು ಲಿಂಗಾಯತ ಮಹಾಸಭಾ ಬಸವ ಜನ ಜಾಗೃತಿ ಸಂಘಟನೆ ಹಾಗೂ ಬಸವ ಫೌಂಡೇಶನ್ ಜಗಜ್ಯೋತಿ ಬಸವೇಶ್ವರ ಸಂಘಟನೆ ಪದಾಧಿಕಾರಿಗಳು, ಬಸವ ಭಕ್ತರು ಸ್ವಾಗತ ಮಾಡಿದರು.

ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಲಿಂಗಾಯತ ಮಹಾಸಭಾ ಟ್ರಸ್ಟ್ ಅಧ್ಯಕ್ಷ ಎಂ.ಬೆಟ್ಟಹಳ್ಳಿ ಎಂ.ಎಸ್. ಮಂಜುನಾಥ್, ಜಗಜ್ಯೋತಿ ಬಸವೇಶ್ವರ ಸಂಘದ ಅಧ್ಯಕ್ಷ ವಿ.ಎಂ.ಜಗದೀಶ್ ಮುಖಂಡರಾದ ಅರ್ಪಣ, ಮರಿಬಸವಯ್ಯ, ಸೋಮಶೇಖರ್, ಪ್ರದೀಪ್ ಕುಮಾರ್, ಮಲ್ಲುಸ್ವಾಮಿ, ಪರಶಿವಮೂರ್ತಿ, ವೀಣಾ ಕಾಶೀನಾಥ್, ಪೂರ್ಣಿಮಾ ಇತರರು ಇದ್ದರು.