ಜಿಲ್ಲೆ

ದೇವರು ನಡೆದಾಡಿದ ಪುಣ್ಯಭೂಮಿ ಭಾರತ

ಕುಂದಗೋಳ: ಭಾರತ ಕೇವಲ ಕಲ್ಲು, ಮಣ್ಣಿನ ಭೂಮಿ ಅಲ್ಲ. ಬದಲಾಗಿ ಇದು ಸಾಕ್ಷಾತ್ ದೇವರು ನಡೆದಂತಹ ಪುಣ್ಯಭೂಮಿ. ಈ ಪುಣ್ಯಭೂಮಿಯ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ ಎಂದು ಆರ್​ಎಸ್​ಎಸ್ ಪ್ರಾಂತ ಕಾರ್ಯವಾಹಕ ರಘುನಂದನ ಜೀ ಹೇಳಿದರು.

ಪಟ್ಟಣದ ಹರಭಟ್ಟ ಹೈಸ್ಕೂಲ್ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100ನೇ ವರ್ಷದ ಆಚರಣೆ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಪಥ ಸಂಚಲನದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಪ್ರಾರ್ಥನೆಯಲ್ಲಿ ಹೇಳುವಂತೆ ‘ಪರಂ ವೈಭವಂ ನೇತುಂ ಏತತ್ ಸ್ವ ರಾಷ್ಟ್ರಂ’ ನಮ್ಮ ರಾಷ್ಟ್ರವನ್ನು ಪರಮ ವೈಭವಕ್ಕೆ ಕೊಂಡೊಯ್ಯಲು ಏನೆಲ್ಲ ಮಾಡಬೇಕು. ಅದನ್ನು ಸಂಘ ಮಾಡುತ್ತದೆ ಎಂದರು.

ಭಾರತೀಯ ಪರಂಪರೆ, ಹಿಂದು ಸಮಾಜ ಪುರುಷ ಪ್ರಧಾನ ಸಮಾಜವೂ ಅಲ್ಲ, ಮಹಿಳಾ ಪ್ರಧಾನ ಸಮಾಜವೂ ಅಲ್ಲ. ಬದಲಿಗೆ ಇದು ಮಾತೃ ಪ್ರಧಾನ ಸಮಾಜ. ನಮಗೆ ನಮ್ಮ ತಾಯಿ ಎಲ್ಲರಿಗಿಂತ ದೊಡ್ಡವಳು. ಯಾರು ಮನೆಯಲ್ಲಿ ತಾಯಿಗೆ ಗೌರವ ಕೊಡುತ್ತಾರೋ ಆ ಮನೆ ಬಲವಾಗಿ ಉಳಿಯುತ್ತದೆ ಎಂದರು.

ಜಗತ್ತಿಗೆ ಒಳ್ಳೆಯದನ್ನು ಬಯಸುವ ಏಕೈಕ ಧರ್ಮ ಹಿಂದು ಧರ್ಮ. ಗಿಡ, ನದಿ, ಸಸಿ, ಹೆಣ್ಣು ಮಕ್ಕಳನ್ನು ನಮ್ಮ ಧರ್ಮದಲ್ಲಿ ಪೂಜಿಸುತ್ತೇವೆ. ಅಂತಹ ಹಿಂದು ಧರ್ಮ ಜಗತ್ತಿಗೆ ಒಳ್ಳೆಯದನ್ನು ಮಾತ್ರ ಮಾಡಬಲ್ಲದು. ಕನಕದಾಸ, ಬಸವಣ್ಣ, ಶಂಕರಾಚಾರ್ಯ, ಅಂಬೇಡ್ಕರ್ ಸೇರಿದಂತೆ ಎಲ್ಲ ಮಹಾಪುರುಷರು ಹಿಂದು ಸಮಾಜದ ನಾಯಕರು ಎಂದರು.

ಸಂಘದ ನೂರು ವರ್ಷಗಳ ಯಶಸ್ಸಿಗೆ ವ್ಯಕ್ತಿ ನಿರ್ವಣದಿಂದ ರಾಷ್ಟ್ರ ನಿರ್ಮಾಣ ಎಂಬ ಅಚಲ ವಿಶ್ವಾಸವೇ ಕಾರಣ. ಈ ವಿಶ್ವಾಸದಿಂದಲೇ ಸಂಘ ಕೋಟ್ಯಂತರ ಸ್ವಯಂಸೇವಕರನ್ನು ತಯಾರು ಮಾಡಿದೆ. ಸ್ವಯಂಸೇವಕನಿಗೆ ಆತ್ಮಸಂತೋಷ ಮತ್ತು ನಾನು ಈ ತಾಯಿ ಭಾರತೀಯ ಕೆಲಸ ಮಾಡುತ್ತೇನೆ ಎನ್ನುವ ಸಮಾಧಾನ ಮಾತ್ರ ಸಿಗುತ್ತದೆ ಎಂದರು.

ಇದಕ್ಕೂ ಮುನ್ನ ಹರಭಟ್ಟ ಹೈಸ್ಕೂಲ್ ಮೈದಾನದಿಂದ ಆರಂಭವಾದ ಪಥಸಂಚಲನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಶ್ರೀ ಶಿತಿಕಂಠೇಶ್ವರ ಶಿವಾಚಾರ್ಯರು, ಶ್ರೀ ಕಲ್ಯಾಣಪುರದ ಬಸವಣ್ಣಜ್ಜನವರು, ಗೋವಿಂದಪ್ಪ ತಳವಾರ, ಜಿಲ್ಲಾ ಸಂಚಾಲಕ ಡಾ. ವೇದವ್ಯಾಸ ದೇಶಪಾಂಡೆ ವೇದಿಕೆ ಮೇಲಿದ್ದರು.

ಸ್ವಯಂಸೇವಕರಾಗಿ ಶಾಸಕ ಎಂ.ಆರ್. ಪಾಟೀಲ, ಸಿ.ಎಂ. ಕಾಳೆ, ಶ್ಯಾಮಸುಂದರ ದೇಸಾಯಿ, ಉಮೇಶ ಹೆಬಸೂರ, ಮಾಲತೇಶ ಶ್ಯಾಗೋಟಿ, ನಾಗರಾಜ ದೇಶಪಾಂಡೆ, ಎನ್.ಎನ್. ಪಾಟೀಲ, ಪ್ರಕಾಶಗೌಡ ಪಾಟೀಲ, ಮಂಜುನಾಥ ರಾಯಭಾಗ, ಗಣೇಶ ಕೋಕಾಟೆ, ಸತೀಶ ಪಾಟೀಲ, ನಾಗರಾಜ ಶಿಬರಗಟ್ಟಿ, ಸ್ವಯಂ ಸೇವಕರು ಭಾಗವಹಿಸಿದ್ದರು.