ಬೀದರ್: ದುಶ್ಚಟಗಳು ವ್ಯಕ್ತಿಯ ಬದುಕು ಸರ್ವನಾಶ ಮಾಡುತ್ತವೆ. ದೇವರು ಮನುಷ್ಯನಿಗೆ ಅದ್ಭುತ ಕಾಯ ನೀಡಿದ್ದಾನೆ. ಅದನ್ನು ಪರಿಶುದ್ಧವಾಗಿಸಿಕೊಂಡು ಸಂತೃಪ್ತ ಜೀವನ ಸಾಗಿಸಬೇಕು ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ಕಮಲನಗರ ತಾಲ್ಲೂಕಿನ ಮುಧೋಳ(ಬಿ) ಗ್ರಾಮದ ಮಹಾದೇವ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮತ್ತು ತಾಲ್ಲೂಕು ಘಟಕದ ಸಹಯೋಗದಲ್ಲಿ ಸಂಯಮ ಪ್ರಶಸ್ತಿ ಪುರಸ್ಕøತರಾದ ಪ್ರಯುಕ್ತ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಚಟಗಳಿಗೆ ದಾಸರಾಗುವುದರಿಂದ ಗೊತ್ತಿಲ್ಲದಂತೆ ಮನುಷ್ಯನ ಬದುಕು ಹಾಳಾಗುತ್ತದೆ. ಮದ್ಯ, ಗುಟ್ಕಾ, ತಂಬಾಕು ಸೇವನೆಯಿಂದ ಕುಟುಂಬದ ನೆಮ್ಮದಿಗೆ ಭಂಗ ಬರುತ್ತದೆ. ದೇಶದ ಭವಿಷ್ಯ ಆಗಿರುವ ಯುವಶಕ್ತಿ ಹೆಚ್ಚಾಗಿ ವ್ಯಸನಕ್ಕೆ ಬಲಿಯಾಗುತ್ತಿರುವುದು ಆತಂಕ ತರಿಸಿದೆ. ಬಸವಣ್ಣನವರು ದೇಹವನ್ನು ದೇಗುಲಕ್ಕೆ ಹೊಲಿಸಿದ್ದಾರೆ. ಅಂತಹ ದೇಹ, ಮನಸ್ಸು ಯಾವ ಚಟಕ್ಕೂ ಬಲಿಯಾಗದಂತೆ ನೋಡಿಕೊಳ್ಳಬೇಕು ಎಂದರು.
ಡಾ.ಚನ್ನಬಸವ ಪಟ್ಟದ್ದೇವರು ನಡೆದಾಡಿದ ಈ ಊರಿನಲ್ಲಿ ನನ್ನನ್ನು ಸತ್ಕರಿಸುವುದು ಎಂದಿಗೂ ಮೆರೆಯುವುದಿಲ್ಲ. ಇಲ್ಲಿಯೇ ಗ್ರಾಮ ಪಂಚಾಯಿತಿ ಆಡಳಿತ ಮದ್ಯ ನಿಷೇಧಕ್ಕೆ ನಿರ್ಣಯ ಕೈಗೊಂಡಿರುವುದನ್ನು ಸ್ವಾಗತಿಸುತ್ತೇನೆ. ಯುವಕರು, ಹಿರಿಯರು ಸೇರಿ ಈ ಗ್ರಾಮವನ್ನು ವ್ಯಸನ ಮುಕ್ತವನ್ನಾಗಿಸಲು ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಶಿವಲಿಂಗ ಶಿವಾಚಾರ್ಯ ಮಠದ ವೈಜಿನಾಥ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ಕಲ್ಪಿಸಿ ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.
ಮುಧೋಳ ಗ್ರಾಮಕ್ಕೂ ಭಾಲ್ಕಿ ಹಿರೇಮಠಕ್ಕೂ ಅವಿನಾಭಾವ ಸಂಬಂಧ ಇದೆ. ಗುರುಬಸವ ಪಟ್ಟದ್ದೇವರಿಗೆ ಸಂಯಮ ಪ್ರಶಸ್ತಿ ಲಭಿಸಿರುವುದು ಸಂತಸ ಉಂಟು ಮಾಡಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‍ನ ನಿರ್ದೇಶಕ ಶಶಿಧರ ಕೋಸಂಬೆ ಮಾತನಾಡಿ, ಈ ಭಾಗದಲ್ಲಿ ಗುರುಬಸವ ಪಟ್ಟದ್ದೇವರು ಶೈಕ್ಷಣಿಕ ಸೇವೆ, ಧರ್ಮ ಪ್ರಚಾರ, ಪ್ರಸಾರ, ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ತೊಟ್ಟಿದ್ದಾರೆ. ಅವರ ಸೇವೆ ಪರಿಗಣಿಸಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ವತಿಯಿಂದ ಸಂಯಮ ಪ್ರಶಸ್ತಿ ದೊರತಿದೆ ಎಂದರು.
ಜಾನಪದ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಸಂಜೀವಕುಮಾರ ಜುಮ್ಮಾ ಮಾತನಾಡಿ, ಜಿಲ್ಲೆಯಲ್ಲಿ ಅನಾಥ ಆಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕ ತರಿಸಿದೆ. ಯುವಕರು ಯಾವುದೇ ವ್ಯಸನಗಳಿಗೆ ಬಲಿಯಾಗದೇ ಹೆತ್ತವರನ್ನು ಗೌರವದಿಂದ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಕ.ರ.ವೇ. ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಪ್ರಾಸ್ತಾವಿಕವಾಗಿ ಮಾತನಾಡಿ, ಗುರುಬಸವ ಪಟ್ಟದ್ದೇವರು ಶ್ರೀಮಠವನ್ನು ಕಟ್ಟಿ ಬೆಳೆಸುವುದರ ಜತೆಗೆ ದುಶ್ಚಟ ರಹಿತ ಸಮಾಜ ಕಟ್ಟಲು ಮುಂದಾಗಿರುವುದು ಹೆಮ್ಮೆಯ ಸಂಗತಿ. ಅವರ ನಿಸ್ವಾರ್ಥ ಸೇವೆಗೆ ಸಂಯಮ ಪ್ರಶಸ್ತಿ ಸಿಕ್ಕಿದೆ. ಅವರನ್ನು ಗೌರವಿಸುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯವೆಂದು ಭಾವಿಸಿದ್ದೇನೆ ಎಂದು ತಿಳಿಸಿದರು.
ಪ್ರಮುಖರಾದ ಜೈಸಿಂಗ್ ರಾಠೋಡ್, ವಿಜಯಕುಮಾರ ಹೊಸಖಂಡೆ, ಹಣಮಂತ ಹೊಸಖಂಡೆ, ಸಚಿನ್ ಕತ್ತೆ, ನಾಗಯ್ಯ ಸ್ವಾಮಿ, ವೀರಶೆಟ್ಟಿ ಧಮನಸಪೂರ್, ಕರವೇ ಜಿಲ್ಲಾ ಘಟಕದ ಗೌರವಾಧ್ಯಕ್ಷ ಖಾದರ್ ಪಾಶಾ, ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ಹೇಡೆ, ಸೂರ್ಯಕಾಂತ ಶಿಂಧೆ, ಮಹೇಶ ಕಾಪಸೆ, ಪ್ರದೀಪ ಬಿರಾದಾರ, ಚಂದು ಕತ್ತೆ, ಅಮೃತರಾವ್ ವಾಡೆ, ಶಾಂತವೀರ ಗೋಧಿಹಿಪ್ಪರ್ಗೆ, ಪಿಡಿಓ ದತ್ತು ಪೂಜಾರಿ, ಶಿವಾನಂದ ಜಾಬಾ ಮತ್ತಿತರರು ಇದ್ದರು.
ವಿದ್ಯಾರ್ಥಿನಿಯರಾದ ದಿವ್ಯಾ ಮತ್ತು ನಂದಿನಿ ಸ್ವಾಗತ ಗೀತೆ ಹಾಡಿದರು. ಹಣಮಂತ ದೇಶಮುಖ ಸ್ವಾಗತಿಸಿದರು. ನಾಗನ್ನಾಥ ಶಂಕು ನಿರೂಪಿಸಿದರು.
ಸಾರೋಟಿಯಲ್ಲಿ ಶ್ರೀಗಳ ಮೆರವಣಿಗೆ
ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಸಾರೋಟಿನಲ್ಲಿ ಗುರುಬಸವ ಪಟ್ಟದ್ದೇವರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಗ್ರಾಮದ ಶಿವಲಿಂಗ ಶಿವಾಚಾರ್ಯ ಮಠದಿಂದ ಆರಂಭಗೊಂಡ ಮೆರವಣಿಗೆ ಕಾಶಿ ವಿಶ್ವನಾಥ ಮಂದಿರ, ಬಸವೇಶ್ವರ ವೃತ್ತದ ರಸ್ತೆ ಮೂಲಕ ಸಾಗಿ ಮಹಾದೇವ ಮಂದಿರದಲ್ಲಿ ಸಮಾವೇಶಗೊಂಡಿತು. ಮೆರವಣಿಗೆಯಲ್ಲಿ ಕುಂಭ ಕಳಸ ಹೊತ್ತ ಮಹಿಳೆಯರ ನಡಿಗೆ, ಮಹಿಳೆಯರ ಜನಪದ ಗೀತೆ, ಚಕ್ರಿ ಭಜನೆ ಗಮನ ಸೆಳೆದವು. ಯುವಕರು ಡಿಜೆ ಸೌಂಡ್‍ಗೆ ಹೆಜ್ಜೆ ಹಾಕಿ ಮೆರವಣಿಗೆ ಕಳೆ ಹೆಚ್ಚಿಸಿದರು.