ಬೀದರ್: ಮನುಷ್ಯನಿಗೆ ದೇವರ ಕೃಪೆಗಿಂತ ದೊಡ್ಡದು ಬೇರೆ ಯಾವುದೂ ಇಲ್ಲ. ನಾವು ನಿರಂತರ ಧಾರ್ಮಿಕ ಕಾರ್ಯ, ಉತ್ಸವಗಳಲ್ಲಿ ಪಾಲ್ಗೊಳ್ಳಬೇಕು ಎಂದು ಪಂಢರಪುರದ ಇಸ್ಕಾನ್ ಮುಖ್ಯಸ್ಥ ಶ್ರವಣ ಭಕ್ತದಾಸರು ಉಪದೇಶಿಸಿದರು.
ಚಿಕ್ಕಪೇಟ್ ಬಳಿಯ ನೀಲಾಚಲ್ ಧಾಮದಲ್ಲಿ ಇಸ್ಕಾನ್ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಇಂದಿನ ಉದ್ವೇಗ, ಒತ್ತಡ, ಭ್ರಷ್ಟತನ, ಅಶಾಂತಿ, ಅಸಮಾಧಾನ ವಾತಾವರಣದಲ್ಲಿ ಶ್ರೀಕೃಷ್ಣನ ಜೀವನ ಬೋಧನೆಯ ಅನುಕರಣೆ ಅಗತ್ಯವಾಗಿದೆ ಎಂದರು.
ಭಗವದ್ಗೀತೆ ಶ್ರೀಕೃಷ್ಣನ ದಿವ್ಯ ಬೋಧನೆಯಾಗಿದೆ. ಇಲ್ಲಿ ಜೀವಿಗಳ ಜನನ, ಮರಣದ ವಿಶ್ಲೇಷಣೆಗಳಿವೆ. ಬಾಲ್ಯ, ಯೌವನ, ವೃದ್ಧಾಪ್ಯದ ಕರ್ತವ್ಯಗಳಿವೆ. ಇದು ಮನುಷ್ಯನ ಸರ್ವಾಂಗೀಣ ಉನ್ನತಿಗೆ ಕಾರಣವಾಗುವ ಅಂಶಗಳನ್ನು ಒಳಗೊಂಡಿದೆ. ಕೃಷ್ಣ ಲೀಲೆಗಳು ನಮ್ಮೊಳಗಿನ ಸದ್ವಿಚಾರ, ಸದ್ಭಾವ ಜಾಗೃತಗೊಳಿಸುತ್ತದೆ. ನಮ್ಮ ಜೀವನ ಸಾತ್ವಿಕ ಮತ್ತು ಸಾರ್ಥಕ್ಯದೆಡೆಗೆ ಕೊಂಡೊಯ್ಯುತ್ತದೆ. ಅದಕ್ಕೆಂದೇ ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲ ಎಂದಿದ್ದಾರೆ ಎಂದರು.
ಡಾ.ನೀಲೇಶ್ ದೇಶಮುಖ, ಶಿವರಾಮ ಜೋಶಿ, ಗಿರೀಶ ಕುಲಕರ್ಣಿ, ರಾಜಕುಮಾರ ಅಳ್ಳೆ, ಹರ್ಷಾನಂದ ಪಾಟೀಲ್, ಡಾ.ಮಹೇಶ ಉನ್ನಿ, ವೀರಶೆಟ್ಟಿ ಮಣಗೆ, ಸಿದ್ದು ಮಣಗೆ, ನಿರಂಜನ ಮೈಲಾರೆ, ವಿನೋದ ಕೋಟೆ, ಶಿವಾನಂದ ಬಳ್ಳೂರೆ, ರಾಜಕುಮಾರ ಅಗ್ರವಾಲ್, ಶಿವರತನ್ ಮಾಲಾನಿ, ಬಾಬು ಅರ್ಥಮ್, ವಿಜಯಕುಮಾರ ಸೋನಾಳೆ, ಮಹೇಶ ನಿಟ್ಟೂರಕರ್, ಸೋಮಶೇಖರ ಬಿರಾದಾರ್, ಗೋವಿಂದ ಕುಲಕರ್ಣಿ, ಪಂಡಿತ ಮದಕಟ್ಟಿ, ಶಿವರಥನ್ ಮಾಲಾನಿ ಇದ್ದರು.