ಜಿಲ್ಲೆ

ದೇವರಾಜೇಗೌಡ ಜತೆ ಯಾವುದೇ ಹಣಕಾಸಿನ ಬಗ್ಗೆ ಮಾತನಾಡಿಲ್ಲ: ಗೋಪಾಲಸ್ವಾಮಿ

Hassan - Ramesh H R

ಹಾಸನ: ಪೆನ್‌ಡ್ರೈವ್ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಬಿಜೆಪಿ ಮುಖಂಡ ದೇವರಾಜೇಗೌಡನೂಂದಿಗೆ ನಾನು ಯಾವುದೇ ಹಣಕಾಸಿನ ಬಗ್ಗೆ ಮಾತನಾಡಿಲ್ಲ ಆರೋಪಗಳು ಶುದ್ಧ ಸುಳ್ಳು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹೇಳಿದರು.
ಪೆನ್‌ಡ್ರೈವ್ ಪ್ರಕರಣದಲ್ಲಿ ವಿನಾಕಾರಣ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಿಲುಕಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುತಂತ್ರ ಮಾಡಿಸುತ್ತಿದ್ದಾರೆ.ಅಲ್ಲದೇ 100 ಕೋಟಿರೂ. ಆಫರ್ ನೀಡಿ ಸಂಧಾನಕ್ಕಾಗಿ ನಾನು ಮುಂಗಡವಾಗಿ 5 ಕೋಟಿರೂ. ಹಣ ನೀಡಲು ಹೋಗಿರುವುದನ್ನ ಸಾಬೀತಾದರೆ ರಾಜಕೀಯವನ್ನೇ ಬಿಡುತ್ತಾನೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.
ದೇವರಾಜೇಗೌಡ ಜೊತೆ ರಾಜಕೀಯವಾಗಿ ಮಾತನಾಡಿದ್ದೇನೆ. ಆದರೆ, ನಾನು ಬೆಂಗಳೂರಿನ ಬೋರಿಂಗ್ ಕ್ಲಬ್‌ನಲ್ಲಿ ಅವರನ್ನು ಭೇಟಿಯಾಗಿಲ್ಲ. ಅಲ್ಲದೇ ದೇವರಾಜೇಗೌಡ ಹೇಳಿರುವಂತೆ ಬೋರಿಂಗ್ ಕ್ಲಬ್‌ನ 110ನೇ ರೂಮ್‌ಯೇ ಇಲ್ಲ. ನಾನು ಅಂದು ಹಣ ತಂದಿದ್ದರೆ ಐಟಿ, ಇಡಿ ಅವರಿಗೆ ಮಾಹಿತಿ ನೀಡಿ ನನ್ನನ್ನು ಹಿಡಿದುಕೊಡಬೇಕಿತ್ತು. ಈಗಲೂ ಕ್ಲಬ್‌ನಲ್ಲಿರುವ ಸಿಸಿಟಿವಿ ಪರಿಶೀಲಿಸಲಿ. ಈ ತನಿಖೆ ನಡೆಸಿ ದೇವರಾಜೇಗೌಡ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಚಾರ ಪಡೆದುಕೊಳ್ಳಲು ಡಿ.ಕೆ.ಶಿವಕುಮಾರ್, ಸಚಿವರಾದ ಚೆಲುವರಾಯಸ್ವಾಮಿ, ಕೃಷ್ಣೇಬೈರೇಗೌಡ, ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ. ಪ್ರಿಯಾಂಕ್ ಖರ್ಗೆ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರು ವುದರಿಂದ ಅವರ ಹೆಸರು ಕೆಡಿಸಲು ಹೀಗೆಲ್ಲ ಮಾತನಾಡುತ್ತಿದ್ದಾನೆ. ನಮ್ಮ ನಾಯಕರು ಅವನ ಜೊತೆ ಫೋನ್‌ನಲ್ಲಿ ಮಾತನಾಡಬಾರದಿತ್ತು. ಡಿ.ಕೆ.ಶಿವಕುಮಾರ್ ಅವರಿಗೆ ಯಾರೇ ಫೋನ್ ಕೊಟ್ಟರೂ ಮಾತನಾಡುತ್ತಾರೆ. ಅದೇ ರೀತಿ ದೇವರಾಜೇಗೌಡನ ಜೊತೆ ಮಾತನಾಡಿದ್ದಾರೆ, ಸಾಕ್ಷಿ ಇದೆ ಕೊಡು ಎಂದಿದ್ದಾರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ದೇವರಾಜೇಗೌಡ ಡೂಪ್ಲಿಕೇಟ್ ವಕೀಲನೋ, ಒರಿಜಿನಲ್ ವಕೀಲನೋ ಗೊತ್ತಿಲ್ಲ. ಯಾವಾಗಲೂ ಕೋಟ್ ಹಾಕಂಡು ಸುದ್ದಿಗೋಷ್ಠಿ ಮಾಡುತ್ತಿರುತ್ತಾನೆ. ಸಂಸದ ಪ್ರಜ್ವಲ್ ರೇವಣ್ಣ ಸುಳ್ಳು ಅಫಿಡೆವಿಡ್ ಕೇಸ್‌ನಲ್ಲಿ ಈತನೇ ರೇವಣ್ಣ ಕುಟುಂಬದ ವಿರುದ್ಧ ಹೋರಾಟ ಮಾಡುತ್ತಿದ್ದ. ಆ ವಿಚಾರಕ್ಕೆ ನಮ್ಮೊಂದಿಗೂ ಮಾತನಾಡುತ್ತಿದ್ದ. ಆ ವಿಚಾರದಲ್ಲಿ ಸಲಹೆಗಳನ್ನು ಕೊಟ್ಟಿದ್ದವು. ನಮ್ಮ ಪಕ್ಷದಲ್ಲಿ ಇದ್ದಾಗ ನಾನೇ ಅವರನ್ನು ಜಿಲ್ಲಾ ಪಂಚಾಯಿತಿ ಕೆಡಿಪಿ ಸದಸ್ಯನನ್ನಾಗಿ ಮಾಡಿದ್ದೆ, ಕಿಸಾನ್ ಘಟಕದ ಅಧ್ಯಕ್ಷನನ್ನಾಗಿಯೂ ಮಾಡಿದ್ದೇವು. ಆದರೀಗ ದೇವರಾಜೇಗೌಡಗೆ ಬುದ್ಧಿ ಭ್ರಮಣೆಯಾಗಿ ಹೀಗೆಲ್ಲ ಮಾತನಾಡುತ್ತಿದ್ದಾನೆ ಎಂದು ದೂರಿದರು.
ಪೆನ್‌ಡ್ರೈವ್ ಪ್ರಕರಣದಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತು ದೇವರಾಜೇಗೌಡ ಜೊತೆಯಾಗಿದ್ದಾರೆ. ಒಬ್ಬರನ್ನೊಬ್ಬರು ಬಿಟ್ಟು ಕೊಡುತ್ತಿಲ್ಲ. ಇದನ್ನೆಲ್ಲ ಗಮನಿಸಿದರೆ ಎಚ್.ಡಿ.ಕುಮಾರಸ್ವಾಮಿ-ದೇವರಾಜೇಗೌಡ ಸೇರಿಕೊಂಡು ಎಚ್.ಡಿ.ರೇವಣ್ಣ ಅವರ ಕುಟುಂಬವನ್ನು ಮುಗಿಸಲು ಹೊರಟಿರುವಂತೆ ಕಾಣುತ್ತದೆ. ಡಿ.ಕೆ.ಶಿವಕುಮಾರ್ ಅವರು ಒಕ್ಕಲಿಗ ಸಮುದಾಯದ ಪ್ರಭಾವಿ ವ್ಯಕ್ತಿಯಾಗಿ ಬೆಳೆಯುತ್ತಿರುವುದನ್ನು ಸಹಿಸಲಾಗದೆ ಕುಮಾರಸ್ವಾಮಿ ಅವರು ದೇವರಾಜೇಗೌಡ ಹಿಂದೆ ನಿಂತು ತಿಮಿಂಗಿಲ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.