ದೇವರಾಜ ಮಾರುಕಟ್ಟೆಯ ಬಾಡಿಗೆ ಪರಿಷ್ಕರಣೆಗೆ ಸಂಬಂಧಿಸಿದಂತೆ ಶಾಸಕ ಕೆ. ಹರೀಶ್ ಗೌಡ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ ನಡೆಯಿತು. ಎಂ.ಕೆ. ಸವಿತಾ, ಸೋಮಶೇಖರ್ ಜಿಗಣಿ ಹಾಗೂ ಇತರರು ಇದ್ದರು.  
ಜಿಲ್ಲೆ

ದೇವರಾಜ ಮಾರುಕಟ್ಟೆ ಬಾಡಿಗೆ ಪರಿಷ್ಕರಣೆ: ವರ್ತಕರ ಆಕ್ರೋಶ

ಮೈಸೂರು: ನಗರದ ದೇವರಾಜ ಮಾರುಕಟ್ಟೆಯ ಮಳಿಗೆಗಳ ಬಾಡಿಗೆ ಪರಿಷ್ಕರಣೆ ಕುರಿತು ನ.23 ರಂದು ಅಂತಿಮ ಸುತ್ತಿನ ಸಭೆ ನಡೆಸಿ ತೀಮಾ ನರ್ ಕೈಗೊಳ್ಳಲು ಶಾಸಕ ಕೆ.ಹರೀಶ್‌ಗೌಡ ಅಧ್ಯಕ್ಷತೆಯಲ್ಲಿ ಮಂಗಳವಾರ ನಗರ ಪಾಲಿಕೆ ಸಭಾಂಗಣದಲ್ಲಿ ಆಯೋಜಿಸಿದ್ದ ನಗರ ಪಾಲಿಕೆ ಅಧಿಕಾರಿಗಳು ಹಾಗೂ ವರ್ತಕರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಬಾಡಿಗೆಯನ್ನು ಮನಸೋಇಚ್ಛೆ ಏರಿಕೆ ಮಾಡಲಾಗಿದೆ. 3 ಸಾವಿರ ರೂ. ಬಾಡಿಗೆ ಪಾವತಿ ಮಾಡುತ್ತಿದ್ದ ಮಳಿಗೆದಾರರು 30 ಸಾವಿರ ರೂ. ಬಾಡಿಗೆ ಪಾವತಿಸುವ ಪರಿಸ್ಥಿತಿಯನ್ನು ಪಾಲಿಕೆ ನಿರ್ಮಣ ಮಾಡಿದೆ. ಇಷ್ಟೊಂದು ದೊಡ್ಡ ಮೊತ್ತದ ಬಾಡಿಗೆ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ವರ್ತಕರು ಅಳಲು ತೋಡಿಕೊಂಡರು. ಆದರೆ, ಕಳೆದ 23 ವರ್ಷಗಳಿಂದ ಬಾಡಿಗೆ ದರ ಪರಿಷ್ಕರಣೆಯಾಗಿಲ್ಲ. ಮಾರುಕಟ್ಟೆಯ ಅಭಿವೃದ್ಧಿ ಕಾರ್ಯವೂ ಆಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಅನಿವಾಯವಾಗಿದೆ. ಹೀಗಾಗಿ ನ್ಯಾಯಸಮ್ಮತ ಬಾಡಿಗೆ ನಿಗದಿ ಮಾಡಲು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ ಅವರಿಂದ ವರದಿ ಪಡೆದು ನ.23 ರಂದು ಅಂತಿಮ ತೀರ್ಮಾನ ಕೈಗೊಳ್ಳಲು ತೀರ್ಮಾನಿಸಲಾಯಿತು.

ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಮಾತನಾಡಿ, ದೇವರಾಜ ಮಾರುಕಟ್ಟೆಯಲ್ಲಿರುವ 822 ಮಳಿಗೆ ಸೇರಿದಂತೆ ವಿವಿಧ ಮಾರುಕಟ್ಟೆಯಲ್ಲಿರುವ ಒಟ್ಟು 1647 ಸರ್ಕಾರಿ ಮಳಿಗೆಗಳಿಗೆ ಕಳೆದ 23 ವರ್ಷದಿಂದ ಬಾಡಿಗೆ ಪರಿಷ್ಕರಣೆ ಮಾಡಿರಲಿಲ್ಲ. ಸರ್ಕಾರದ ಆದೇಶದಂತೆ ಬಾಡಿಗೆ ಹೆಚ್ಚಳ ಅನಿವಾರ್ಯ. ವರ್ತಕರು ಇದುವರೆಗೂ ಕಡಿಮೆ ಬಾಡಿಗೆ ನೀಡುತ್ತಾ ಬಂದಿದ್ದು, ಇದೀಗ ಪರಿಷ್ಕರಿಸಿದ ಹೊಸ ಬಾಡಿಗೆಯನ್ನು ಪಾವತಿಸಬೇಕಾಗಿದೆ ಎಂದರು.

ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ಬದಲಾದ ಪರಿಸ್ಥಿತಿ, ವಸ್ತುಗಳ ಬೆಲೆ ಏರಿಕೆ, ನಿರ್ವಹಣಾ ವೆಚ್ಚ ಹೆಚ್ಚಳ ಸೇರಿದಂತೆ ವಿವಿಧ ಕಾರಣಗಳಿಂದ ದೇವರಾಜ ಮಾರುಕಟ್ಟೆಯಲ್ಲಿರುವ ಮಳಿಗೆಗಳ ಬಾಡಿಗೆ ದರ ಹೆಚ್ಚಳ ಅನಿವಾರ್ಯ. ಇದಕ್ಕೆ ವರ್ತಕರು ಸಹಕರಿಸಬೇಕು. 23 ವರ್ಷದಿಂದ ಬಾಡಿಗೆ ಹೆಚ್ಚಿಸಿಲ್ಲ. 2019ರಲ್ಲಿ ಅಂದಿನ ಸರ್ಕಾರ ಎಸ್‌ಆರ್ ರೇಟ್‌ಗೆ ಅನುಗುಣವಾಗಿ ಲೋಕೋಪಯೋಗಿ ಇಲಾಖೆ ವತಿಯಿಂದ ಚದರ ಅಡಿ ಲೆಕ್ಕದಲ್ಲಿ ಹೊಸ ಬಾಡಿಗೆ ದರ ನಿಗದಿ ಮಾಡಿದೆ. ಇದರಿಂದ ದೇವರಾಜ ಮಾರುಕಟ್ಟೆಯಲ್ಲಿ ಈ ಹಿಂದೆ 2214 ರೂ ಬಾಡಿಗೆ ಪಾವತಿಸುತ್ತಿದ್ದ ಮಳಿಗೆದಾರರು ಹೊಸದರದಂತೆ 27,500 ರೂ. ಪಾವತಿಸಬೇಕಾಗಿದೆ. ಹೀಗಾಗಿ ವರ್ತಕರು ಉಳಿಯಬೇಕಾಗಿದೆ ಜತೆಗೆ ಪಾಲಿಕೆಗೂ ಈಗಿನ ಪರಿಸ್ಥಿತಿಗೆ ಅನುಗುಣವಾದ ಬಾಡಿಗೆ ದೊರೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಮಳಿಗೆದಾರರು ಪರಿಷ್ಕರಿಸಿದ ಬಾಡಿಗೆ ಮೊತ್ತವನ್ನು ಪಾವತಿಸುವುದು ಅನಿವಾರ್ಯ. ದೇವರಾಜ ಮಾರುಕಟ್ಟೆ ಕಟ್ಟಡ ನವೀಕರಣ ಮಾಡಲು, ಸ್ವಚ್ಛತೆ ಹಾಗೂ ಮೂಲ ಸೌಲಭ್ಯ ಒದಗಿಸಲು ಹೆಚ್ಚಿನ ಅನುದಾನ ವ್ಯಯ ಮಾಡಬೇಕಾಗಿದೆ. ಈ ಎಲ್ಲ ಕಾರಣದಿಂದ ಹಲವು ವರ್ಷದಿಂದ ಕಡಿಮೆ ಮೊತ್ತದ ಬಾಡಿಗೆ ಪಾವತಿಸುತ್ತಾ ಬಂದಿರುವ ಮಳಿಗೆದಾರರು ಪ್ರಸ್ತುತ ವಾತಾವರಣಕ್ಕೆ ಸೂಕ್ತವಾದ ರೀತಿಯಲ್ಲಿ ಬಾಡಿಗೆ ಹೆಚ್ಚಿಸಿ ಪಾವತಿಸಬೇಕು ಎಂದು ಸಲಹೆ ನೀಡಿದರು.

ಬಾಡಿಗೆ ಹೆಚ್ಚಳದ ವಿಚಾರದಲ್ಲಿ ಮಳಿಗೆದಾರರು ಸಂಘರ್ಷಕ್ಕೆ ಇಳಿದರೆ ಮುಂದಿನ ದಿನದಲ್ಲಿ ತೊಂದರೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ. ಆ ಕಾರಣದಿಂದ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಮಾರುಕಟ್ಟೆಯ ಎಸ್‌ಆರ್ ದರಕ್ಕೆ ಅನುಗುಣವಾಗಿ 2019ರಲ್ಲಿ ನಿಗದಿ ಮಾಡಿರುವ ಬಾಡಿಗೆ ುಳಿಗೆದಾರರಿಗೆ ಹೊರೆಯಾಗಬಹುದು. ಈ ಹಿನ್ನೆಲೆಯಲ್ಲಿ ಹೊಸದರ ನಿಗದಿ ಮಾಡಲು ಪಾಲಿಕೆ ಅಧಿಕಾರಿಗಳು ಹಾಗೂ ಮಳಿಗೆದಾರರ ಪ್ರತಿನಿಧಿಗಳೊಂದಿಗೆ ಮುಂದಿನ ಸೋಮವಾರ ಸಭೆ ನಡೆಸಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ನಗರ ಪಾಲಿಕೆ ಉಪ ಆಯುಕ್ತೆ ಸೋಮಶೇಖರ್ ಜಿಗಣಿ, ಪಾಲಿಕೆ ಮಾಜಿ ಸದಸ್ಯರಾದ ಡಿ.ನಾಗಭೂಷಣ್, ಜೆ.ಗೋಪಿ ಹಾಗೂ ಇತರರು ಇದ್ದರು.

4 ಕೋಟಿ ಸಂಗ್ರಹ ನಿರೀಕ್ಷೆ

ನಗರದ ದೇವರಾಜ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಇರುವ ನಗರ ಪಾಲಿಕೆಗೆ ಸೇರಿದ 1647 ಮಳಿಗೆಗಳಲ್ಲಿ ಇದುವರೆಗೆ ತಿಂಗಳಿಗೆ 1.59 ಕೋಟಿ ರೂ. ಬಾಡಿಗೆ ಸಂಗ್ರಹವಾಗುತ್ತಿದೆ. ಪರಿಷ್ಕತ ಬಾಡಿಗೆ ಚಾಲ್ತಿಗೆ ತಂದರೆ ತಿಂಗಳಿಗೆ 3 ರಿಂದ 4 ಕೋಟಿ ರೂ. ಬಾಡಿಗೆ ಸಂಗ್ರಹವಾಗುತ್ತದೆ ಎಂದು ನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ತಿಳಿಸಿದರು.

ನವೀಕರಣಕ್ಕೆ 500 ಕೋಟಿ ರೂ.

ನಗರದ ಪಾರಂಪರಿಕ ಕಟ್ಟಡಗಳಾದ ಲ್ಯಾನ್ಸ್‌ಡೌನ್ ಹಾಗೂ ದೇವರಾಜ ಮಾರುಕಟ್ಟೆಯನ್ನು ಒಡೆದು ಕಟ್ಟಬಾರದು ಎಂದು ಸುಪ್ರೀಂ ಕೋರ್ಟ್ ಅದೇಶ ನೀಡಿದೆ. ಹೀಗಾಗಿ ನವೀಕರಣ ಕಾರ್ಯ ಕೈಗೊಳ್ಳಬೇಕಾಗಿದ್ದು, ಸರ್ಕಾರದ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ. ಈ ನಡುವೆ ಅಮೆರಿಕಾ ಎಂಬೆಸ್ಸಿಯಂತಹ ಸಂಸ್ಥೆಗಳು ನವೀಕರಣಕ್ಕೆ ಮುಂದೆ ಬಂದಿದೆ. ಈ ಎಲ್ಲ ಪ್ರಸ್ತಾವನೆ ಸರ್ಕಾರಕ್ಕೆ ಹೋಗಿದೆ. ನವೀಕರಣಕ್ಕೆ 500 ಕೋಟಿ ರೂ.ಗಿಂತ ಹೆಚ್ಚು ಹಣದ ಅವಶ್ಯಕತೆ ಇದ್ದು, 2 ತಿಂಗಳ ಒಳಗೆ ಈ ಬಗ್ಗೆ ತೀರ್ಮಾನ ಆಗುತ್ತದೆ ಎಂದು ನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಹೇಳಿದರು.

ಕನ್ನಡಿಗರಿಗೆ ಮಳಿಗೆ ನೀಡಿ

ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜಸ್ ಲೋಕೇಶ್‌ಗೌಡ ನೇತೃತ್ವದ ತಂಡ ನಗರ ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಅವರಿಗೆ ಮನವಿ ಸಲ್ಲಿಸಿ, ದೇವರಾಜ ಮಾರುಕಟ್ಟೆಯಲ್ಲಿ ಒಬ್ಬೊಬ್ಬರಿಗೆ 3, 4 ಮಳಿಗೆ ನೀಡಲಾಗಿದೆ. ಅವುಗಳನ್ನು ಹಿಂಪಡೆಯಬೇಕು. ಒಬ್ಬರಿಗೆ ಒಂದೇ ಮಳಿಗೆ ನೀಡಬೇಕು. ಅಲ್ಲದೆ, ಕನ್ನಡಿಗರಿಗೆ, ಸ್ಥಳೀಯರಿಗೆ ಮಳಿಗೆ ನೀಡಬೇಕು ಎಂದು ಒತ್ತಾಯಿಸಿದರು.