ಚಿತ್ರದುರ್ಗ: ಡಿ.ದೇವರಾಜ ಅರಸು ಜಯಂತಿಗೆ ಅಗತ್ಯ ಸಿದ್ಧತೆ ಕೈಗೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಅರಸು ಅವರು ರಾಜ್ಯದಲ್ಲಿ ವಿದ್ಯಾರ್ಥಿನಿಲಯ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸುವ ಮೂಲಕ ಹಿಂದುಳಿದ ವರ್ಗಗಳ ಮಕ್ಕಳ ಶಿಕ್ಷಣಕ್ಕೆ ಇಂಬು ನೀಡಿದರು ಂದು ಸ್ಮರಿಸಿದರು.
ಕಾಂತ್ರಿಕಾರಿ ಭೂ ಸುಧಾರಣೆ ಕಾಯ್ದೆ ಅನುಷ್ಠಾನಗೊಳಿಸಿದರು. ಸಾಮಾಜಿಕ ನ್ಯಾಯಕ್ಕೆ ಮುನ್ನುಡಿ ಬರೆದ ಧೀಮಂತ ನಾಯಕ ಎಂದು ಬಣ್ಣಿಸಿದರು.
ಆ.20ರಂದು 108ನೇ ಜನ್ಮದಿನವನ್ನು ಜಿಲ್ಲಾಡಳಿತ, ಜಿಪಂ, ಹಿಂದುಳಿದ ವರ್ಗಗಳ ಇಲಾಖೆಯಿಂದ ವಿಜೃಂಭಣೆಯಿಂದ ಆಚರಿಸಲಾಗುವುದು. ನೀಲಕಂಠೇಶ್ವರ ಸ್ವಾಮಿ ದೇಗುಲದಿಂದ ತರಾಸು ರಂಗಮಂದಿರದವರೆಗೂ ಜಾನಪದ ಕಲಾತಂಡಗಳೊಂದಿಗೆ ಅರಸು ಭಾವಚಿತ್ರ ಮೆರವಣಿಗೆ ನಡೆಯಲಿದೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸುಬ್ರಾನಾಯಕ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಹನುಮನಾಯಕ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಬಾಬುರತ್ನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಇತರರಿದ್ದರು.
ಮಗ್‌ಶಾಟ್ (ಬಿ.ಟಿ.ಕುಮಾರಸ್ವಾಮಿ)