ಮೈಸೂರು: ದೇವನಹಳ್ಳಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಎಸಗಿರುವ ದೌರ್ಜನ್ಯವನ್ನು ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ನಗರದ ರಾಮಸ್ವಾಮಿ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ದೇವನಹಳ್ಳಿಯಲ್ಲಿ ರೈತರು, ಹೋರಾಟಗಾರರ ಮೇಲೆ ನಡೆದ ಪೊಲೀಸ್ ದಬ್ಬಾಳಿಕೆ, ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ಘೋಷಣೆ ಕೂಗಿದರು.
ಬಲವಂತದ ಭೂಸ್ವಾಧೀನದ ವಿರುದ್ಧ ದೇವನಹಳ್ಳಿಯ ಸುತ್ತಲಿನ 13 ಗ್ರಾಮಗಳ ರೈತರು ಕಳೆದ 1,177 ದಿನಗಳಿಂದ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದರು. ವಿವಿಧ ಮಾದರಿಯ ಹೋರಾಟಕ್ಕೂ ಸರ್ಕಾರ ಸ್ಪಂದಿಸದ ಕಾರಣ ಪ್ರತಿಭಟನೆ ಸ್ವರೂಪ ತೀವ್ರಗೊಳಿಸಿದ್ದರು.
ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹತ್ತಾರು ಸಂಘಟನೆಗಳ ಸಾವಿರಾರು ಜನ ಸೇರಿದ್ದರು. ಇಡೀ ದಿನ ಶಾಂತಿಯುತವಾಗಿ ನಡೆದ ಹೋರಾಟದ ವೇದಿಕೆಗೆ ಏಕಾಏಕಿ ನುಗ್ಗಿದ ಪೊಲೀಸರು ಪ್ರತಿಭಟನಾಕಾರರನ್ನು ಎಳೆದಾಡಿ ಬಂಧಿಸಿದ ರೀತಿ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ರೈತ ವಿರೋಧಿ, ಸಂವಿಧಾನದ ಹಕ್ಕುಗಳ ವಿರೋಧಿ, ಭೂ ಸ್ವಾಧೀನ ನೀತಿಗಳನ್ನು ಯಾವುದೇ ಕಾರಣಕ್ಕೂ ಮುಂದುವರೆಸಬಾರದು. ಫಲವತ್ತಾದ ಭೂಮಿಯಲ್ಲಿ ತಮ್ಮ ಬದುಕು ಕಂಡುಕೊಂಡ ರೈತರ ತಂಟೆಗೆ ಬರಬೇಡಿ. ರೈತರ ಭೂಮಿ ರೈತರದ್ದೇ ಆಗಿ ಉಳಿಸಬೇಕು. ಬೇಷರತ್ತಾಗಿ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ಆಗ್ರಹಿಸಿದರು.
ರೈತರ ಭೂಮಿಯನ್ನು ಸರ್ಕಾರವು ಯಾವುದೇ ಯೋಜನೆಗೆ ನೀಡಬಾರದು. ಕೂಡಲೇ ಈ ಕುರಿತು ಸಚಿವ ಸಂಪುಟದ ನಿರ್ಣಯ ಮಾಡಬೇಕು. ಬಂಧಿತ ಹೋರಾಟಗಾರರ ವಿರುದ್ಧ ಯಾವುದೇ ಪ್ರಕರಣ ದಾಖಲಿಸದೆ ಬೇಷರತ್ ಬಿಡುಗಡೆ ಮಾಡಬೇಕು. ಅಮಾನವೀಯವಾಗಿ ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚಿಕ್ಕಣ್ಣೇಗೌಡ, ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಪಿ.ಮರಂಕಯ್ಯ, ಸಿದ್ದಪ್ಪ, ಹೆಜ್ಜಿಗೆ ಪ್ರಕಾಶ್, ಆನಂದೂರು ಪ್ರಭಾಕರ್, ವಿಜಯೇಂದ್ರ, ಪ್ರೇಮರಾಜ್, ಕಾರ್ಮಿಕ ಮುಖಂಡರಾದ ಬಾಲಾಜಿ ರಾವ್, ಜಿ.ಜಯರಾಮ್, ರಾಜೇಂದ್ರ, ಬಸವಯ್ಯ, ಜಗನ್ನಾಥ್, ಶಾಕುಂತಲಾ, ಚಂದ್ರಶೇಖರ್, ಬಸವರಾಜ್, ಭೂಮಿಗೌಡ, ರತಿರಾವ್, ಗೋಪಾಲಕೃಷ್ಣ, ಕರುಣಾಕರ್, ಬಾಬುರಾಜ್ ಇನ್ನಿತರರಿದ್ದರು.