ಜಿಲ್ಲೆ

ದೇವನಹಳ್ಳಿಯಲ್ಲಿ 22ಕ್ಕೆ ಬಿಜೆಪಿ ಸಭೆ, ಸಚಿವ ಎಂಟಿಬಿ ನಾಗರಾಜ್ ಮಾಹಿತಿ, ಹೆಚ್ಚಿನ ಕಾರ್ಯಕರ್ತರು ಭಾಗಿಯಾಗಲು ಸೂಚನೆ

ಹೊಸಕೋಟೆ: ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರ ಸಮ್ಮುಖದಲ್ಲಿ ಏ.22ರಂದು ದೇವನಹಳ್ಳಿಯಲ್ಲಿ ಆಯೋಜಿಸಿರುವ ಬಿಜೆಪಿಯ ಸಾರ್ವಜನಿಕ ಸಭೆಗೆ ಹೊಸಕೋಟೆ ಕ್ಷೇತ್ರದ ಪ್ರತಿ ಬೂತ್‌ನಿಂದಲೂ ಹೆಚ್ಚು ಕಾರ್ಯಕರ್ತರು ಭಾಗವಹಿಸಬೇಕು ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಸೂಚಿಸಿದರು.

ನಗರದ ಕನಕ ಕನ್ವೆಷನ್ ಹಾಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹೊಸಕೋಟೆ ಮಂಡಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಸಚಿವ ಅರುಣ್‌ಸಿಂಗ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಂದಾಯ ಸಚಿವ ಆರ್.ಅಶೋಕ್ ಮತ್ತಿತರ ಮುಖಂಡರ ಸಮ್ಮುಖದಲ್ಲಿ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರ ಸಭೆ ಹಮ್ಮಿಕೊಂಡಿದ್ದು, ಹೊಸಕೋಟೆಯಿಂದ ಸುಮಾರು 5 ಸಾವಿರ ಜನ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಮುಂದಿನ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಈಗಿನಿಂದಲೇ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಬೇಕು, ಸರ್ಕಾರದ ಯೋಜನೆ ಅನುಷ್ಠಾನಗಳ ಬಗ್ಗೆ ಮತದಾರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಚಿವರು ಸೂಚನೆ ನೀಡಿದರು.

ರಾಜ್ಯ ಸರ್ಕಾರದ ವಿಶೇಷ ಅನುದಾನದಡಿ ಕ್ಷೇತ್ರದಲ್ಲಿ ನಡೆದಿರುವ, ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಕಾರ್ಯಕರ್ತರು ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು, ಪ್ರತಿ ಮನೆಮನೆಗೂ ಕಾರ್ಯಕರ್ತರು ಭೇಟಿ ನೀಡಿ ಜನರ ನಾಡಿಮಿಡಿತ ಅರಿಯಬೇಕು, ಸರ್ಕಾರದ ಸವಲತ್ತುಗಳನ್ನು ಅರ್ಹರಿಗೆ ತಲುಪುವಂತೆ ನಿಗಾವಹಿಸಬೇಕು, ಜನರ ಕುಂದುಕೊರತೆಗಳ ಬಗ್ಗೆ ಮಾಹಿತಿ ಕಲೆಹಾಕಿ ಅದರ ನಿವಾರಣೆಗೆ ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

ಎಲ್ಲೆಡೆ ಬಿಜೆಪಿ ಅಲೆ: ಕೋವಿಡ್‌ನಂಥ ರಾಷ್ಟ್ರೀಯ ವಿಪತ್ತಿನ ಸಂದರ್ಭದಲ್ಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿದ ಸುಭದ್ರ ಆಡಳಿತ, ರಷ್ಯಾ-ಯೂಕ್ರಾನ್ ಯುದ್ಧದ ವೇಳೆ ಭಾರತ ತಾಳಿದ ಧೋರಣೆ ಮತ್ತಿತರ ಅನೇಕ ಅಂಶಗಳು ಯುವಪೀಳಿಗೆಯ ಮೆಚ್ಚುಗೆಗೆ ಪಾತ್ರವಾಗಿದೆ, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದ್ದು, ಮುಂದಿನ ಚುನಾವಣೆಯಲ್ಲೂ ನಿಚ್ಛಳ ಬಹುಮತದೊಂದಿಗೆ ಪಕ್ಷ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ಎಂಟಿಬಿ ನಾಗರಾಜ್ ವಿಶ್ವಾಸ ವ್ಯಕ್ತಪಡಿಸಿದರು.