ದಾವಣಗೆರೆ: ಹೇರ್‌ಕ್ಲಿಪ್ ಧರಿಸಿ ಬಂದವರತ್ತ ನಗೆ ಬೀರುತ್ತಿದ್ದ ಸಿಟ್ಜು ತಳಿಯ ಲೋಸಿ, ಸಿಂಹವನ್ನು ಹೋಲುತ್ತಿದ್ದ ಟಿಬೆಟಿಯನ್ ಮ್ಯಾಸ್ಚೀಫ್ ಪ್ರಭೇದದ ಬೆಂಗಳೂರಿನ ಬಗೀರಾ, ಕುರಿ ತುಪ್ಪಟ ಹೊದ್ದವಳಂತಿದ್ದ ಸಲ್ಮಾ (ಅಫ್ಘಾನ್ ಹೌಂಡ್), ಗೆದ್ದ ಪದಕವನ್ನು ಕೊರಳಲ್ಲಿರಿಸಿ ಸಂಭ್ರಮಿಸಿದ ರಾಟ್‌ವ್ಹೀಲರ್ (ಲಡ್ಡು)..
ನಗರದ ಬಾಲಕರ ಸರ್ಕಾರಿ ಪ್ರೌಢಶಾಲೆ ಮೈದಾನದ ಬಾಸ್ಕೆಟ್‌ಬಾಲ್ ಅಂಕಣದಲ್ಲಿ ಭಾನುವಾರ ಕಂಡುಬಂದ ಮನಮೋಹಕ ಚಿತ್ರಣವಿದು. ದಾವಣಗೆರೆ ಪೆಟ್ ಲವರ್ಸ್ ಅಸೋಸಿಯೇಷನ್ ಆಯೋಜಿಸಿದ್ದ ರಾಜ್ಯ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಇಡೀ ದಿನ ಮುದ್ದು ನಾಯಿಗಳು ಸದ್ದು ಮಾಡಿದವು.
ಆಯೋಜಕರು ನಂಬರ್‌ಗಳನ್ನು ಕೂಗುತ್ತ, ಪ್ರತಿ ತಳಿಯ ಸಾಕುನಾಯಿಗಳನ್ನು ವೇದಿಕೆಗೆ ಆಹ್ವಾನಿಸುತ್ತಿದ್ದರು. ತೀರ್ಪುಗಾರರು ಅವುಗಳ ಗಾತ್ರ, ಎತ್ತರ, ಹಲ್ಲು, ಚಾಕಚಕ್ಯತೆ, ನಡಿಗೆಗಳನ್ನು ನೋಡಿ ಅಂಕ ನೀಡುತ್ತಿದ್ದರು. ‘ಆಪ್ಕೇ ಕುತ್ತೇ ಕಾ ಕ್ಯಾ ವಿಶೇಷ್ ಹೈ’ ಎಂದೂ ಕೆಲ ಆಕರ್ಷಕ ಶ್ವಾನಗಳ ಮಾಲೀಕರನ್ನು ಪ್ರಶ್ನಿಸುತ್ತಿದ್ದರು. ತಳಿವಾರು ವಿಜೇತ ನಾಯಿಗಳ ಕೊರಳನ್ನು ಪದಕಗಳು ಅಲಂಕರಿಸಿದವು.
ಕೆಲವು ನಾಯಿಗಳು ಕಾರುಗಳಲ್ಲೇ ತಾಸುಗಟ್ಟಲೇ ರೆಸ್ಟ್ ಮಾಡಿದವು! ಅವುಗಳ ದೇಹದ ತುಪ್ಪಳವನ್ನು ಬಾಚಣಿಕೆಯಿಂದ ಬಾಚಿ ಆಗಾಗ್ಗೆ ಸ್ಮಾರ್ಟ್ ಮಾಡುತ್ತಿದ್ದ ಮಾಲೀಕರು, ಬಿಸಿಲಿನ ದಾಹಕ್ಕೆ ಬೆಂಡಾಗಿದ್ದ ಸಾಕುನಾಯಿಗಳಿಗೆ ಐಸ್‌ಕ್ರೀಂ, ಮಂಜುಗಡ್ಡೆ, ನೀರಿನ ಜತೆಗೆ ವಿಶೇಷ ಆಹಾರ ತಿನಿಸಿದರು. ಕೀಟ ಬಾಧೆ ತಡೆಯಲು ಕೆಲವಕ್ಕೆ ಔಷಧ ಸ್ಪ್ರೇ ಮಾಡಿದ್ದೂ ಕಂಡುಬಂತು.
ದಾವಣಗೆರೆ ಅಲ್ಲದೆ, ಹರಪನಹಳ್ಳಿ, ಹರಿಹರ, ಹೊನ್ನಾಳಿ, ಶಿವಮೊಗ್ಗ, ಬೆಂಗಳೂರು, ಶಿರಸಿ ಅಲ್ಲದೆ ನೆರೆಯ ಮಹಾರಾಷ್ಟ್ರ ರಾಜ್ಯ ಸೇರಿ ವಿವಿಧೆಡೆಗಳಿಂದ ಸುಮಾರು 180 ಸಾಕುನಾಯಿಗಳು ಇಲ್ಲಿ ಸೇರಿದ್ದವು. ಪಾಲಕರು ಮಕ್ಕಳೊಂದಿಗೆ ಪ್ರತಿ ಶ್ವಾನಗಳ ಮಾಹಿತಿ ಪಡೆದು ಸೆಲ್ಫೀ ತೆಗೆದುಕೊಳ್ಳುವಲ್ಲಿ ನಿರತರಾಗಿದ್ದರು.
ಟಾಯ್ ಪಮೇರಿಯನ್, ಸೇಂಟ್ ಬರ್ನಾಡ್, ಪಗ್, ಲ್ಯಾಪ್‌ಸೋ, ಸೈಬೇರಿಯನ್ ಹಸ್ಕಿ, ಜರ್ಮನ್ ಷೆಪರ್ಡ್, ಚೌಚೌ, ಗ್ರೇಟ್ ಡೇನ್, ಗೋಲ್ಡನ್ ರಿಡ್ರೀವರ್, ಫ್ರೆಂಚ್ ಬುಲ್‌ಡಾಗ್, ಜಾಕ್‌ರಸೆಲ್, ಬಾಕ್ಸರ್, ಕಾಕರ್ ಸ್ಪೇನಲ್, ಡಾಬರ್‌ಮನ್, ಡ್ಯಾಶ್‌ಹೌಂಡ್ ಸೇರಿ 30ಕ್ಕೂ ಹೆಚ್ಚು ತಳಿಯ ಶ್ವಾನಗಳ ಜಾತ್ರೆ ಇದಾಗಿತ್ತು. ಬೀದಿನಾಯಿಗಳಿಗೂ ಸ್ಪರ್ಧೆಯಲ್ಲಿ ವಿಶೇಷ ಅವಕಾಶ ಕಲ್ಪಿಸಲಾಗಿತ್ತು.
ಕರ್ನಾಟಕದ ವಿಶೇಷ ತಳಿ ಮುಧೋಳ ನಾಯಿಗಳು ಇಲ್ಲಿ ನೆರೆದಿದ್ದವು. ವಿರಳ ತಳಿಗಳಾದ ಬಾಡರ್ ಕೊಲ್ಲಿ, ಬೆಲ್ಜಿಯಂ ಮೆಲಿನಾಯ್ಸ ಹಾಗೂ ಬಿಚನ್ ಫ್ರೈಸ್ ಶ್ವಾನಗಳೂ ಗಮನ ಸೆಳೆದವು.
ಭಾರತದಲ್ಲಿ ಬಾಡರ್‌ಕೊಲ್ಲಿ ತಳಿಯ ಬೆರಳೆಣಿಕೆಯ ನಾಯಿಗಳಲ್ಲಿ ನನ್ನ ‘ಸ್ನೋ’ ಕೂಡ ಒಂದು. ಇದನ್ನು ಕುರಿ ಕಾವಲಿಗೆ ಹೆಚ್ಚು ಬಳಸಲಾಗುತ್ತದೆ. ಮಿಲಿಟರಿಗೆ ಬಳಸುವ ಬೆಲ್ಜಿಯಂ ಮೆಲಿನಾಯ್ಸ ತಳಿ ಸಾಕಿದ್ದಕ್ಕೆ ಹೆಮ್ಮೆ ಇದೆ ಎಂದು ದಾವಣಗೆರೆಯ ಅಭಿನಂದನ್ ಹೇಳಿಕೊಂಡರು.
ಚಾರ್ಲಿ ಕನ್ನಡ ಸಿನಿಮಾದ ನಂತರದಲ್ಲಿ ಲ್ಯಾಬ್ರೋಡಾರ್ ತಳಿಯ ಸಾಕುನಾಯಿಗಳಿಗೆ ಬೇಡಿಕೆ ಹೆಚ್ಚಿದೆ. ಯಾವುದೇ ಶ್ವಾನವನ್ನೂ ವ್ಯವಸ್ಥಿತವಾಗಿ ಸಾಕಿದಾಗ ಅವುಗಳ ವರ್ತನೆ ಬದಲಿಸಬಹುದು. ಪಶುಪಾಲನೆ ಇಲಾಖೆಯಿಂದ ವರ್ಷಕ್ಕೆರಡು ಬಾರಿ ನಡೆಯುವ ಲಸಿಕಾ ಅಭಿಯಾನದಲ್ಲಿ ಸಾಕುನಾಯಿಗಳಿಗೆ ತಪ್ಪದೇ ಚುಚ್ಚುಮದ್ದು ಹಾಕಿಸಲು ಮಾಲೀಕರು ಗಮನ ಹರಿಸಬೇಕೆಂದರು ಹನಗವಾಡಿಯ ಬ್ರದರ್ ಗ್ರೂಪ್ ಕ್ಯಾನಲ್‌ನ ಸಂಚಾಲಕ ಆರ್.ಎಸ್. ನಂದೀಶ್.
ಇದು ಫ್ರೆಂಡ್ಲೀ ಡಾಗ್. ಹೇಳಿದಂತೆ ನಡೆದುಕೊಳ್ಳುತ್ತದೆ. ಇದನ್ನು ಬಿಟ್ಟು ನಾನು ಇರುವುದಿಲ್ಲ. ಇದರ ಊಟಕ್ಕೆ ದಿನಕ್ಕೆ 250 ರೂ. ವೆಚ್ಚ ವಾಗುತ್ತದೆ. ಇತ್ತೀಚೆಗೆ 8 ಮರಿಗಳನ್ನು ಹಾಕಿದೆ ಎಂದು ತಾವು ತಂದಿದ್ದ ಲ್ಯಾಬ್ರೊಡಾರ್ ನಾಯಿಯನ್ನು ಒಡತಿ ಅನಿತಾ ಪರಿಚಯಿಸಿದರು. ದಾವಣಗೆರೆ ಪೆಟ್ ಲವರ್ಸ್ ಅಸೋಸಿಯೇಷನ್‌ನ ಸಂಚಾಲಕ ಸಿರಿಶ್, ಮನೋಜ್, ಸುನಿಲ್ ಪ್ರದರ್ಶನವನ್ನು ನಡೆಸಿಕೊಟ್ಟರು