ಬೀರೂರು: ಮದಗದ ಕೆರೆಯ ಸರಣಿ ಕೆರೆಯಲ್ಲೊಂದಾದ ದೇವನಕೆರೆ ತುಂಬಿ ಕೋಡಿ ಬಿದ್ದಿದ್ದ ಹಿನ್ನೆಲೆಯಲ್ಲಿ ಬೀರೂರು ಅಡಕೆ ಬೆಳೆಗಾರರು ಮತ್ತು ಬಿ.ಕೋಡಿಹಳ್ಳಿ ಗ್ರಾಮಸ್ಥರು ಬಾಗಿನ ಸಮರ್ಪಿಸಿದರು.
ಪುರಸಭೆ ಮಾಜಿ ಸದಸ್ಯ ಮಾರ್ಗದ ಮಧು ಮಾತನಾಡಿ, ಬೀರೂರಿನಲ್ಲಿ ಕೆಲವು ವರ್ಷಗಳು ಸರಿಯಾದ ಮಳೆಯಾಗದೆ ಬರ ಆವರಿಸಿತ್ತು. ಕಡೂರು ತಾಲೂಕಿನ ಜೀವನಾಡಿಯಾಗಿರುವ ಮದಗದ ಕೆರೆ ಪ್ರತಿ ವರ್ಷ ಕೋಡಿ ಬೀಳುವುದರಿಂದ 32ಕ್ಕೂ ಹೆಚ್ಚಿನ ಕೆರೆಗಳಿಗೆ ವರದಾನವಾಗಿದೆ. ಜಲಮೂಲಗಳು ಮಾಯವಾಗುತ್ತಿರುವ ಸಂದರ್ಭದಲ್ಲಿ ಕೆರೆ ಕಟ್ಟೆಗಳನ್ನು ಉಳಿಸಿಕೊಂಡಲ್ಲಿ ಅಂತರ್ಜಲವೂ ಅಭಿವೃದ್ಧಿಗೊಳ್ಳುತ್ತದೆ ಎಂದರು.
ಪುರಸಭೆ ಸದಸ್ಯ ಕೆ.ಆರ್.ರಘು ಮಾತನಾಡಿ, ಬೀರೂರು ಪ್ರಮುಖವಾಗಿ ಅಡಕೆ ಬೆಳೆಗೆ ಹೆಸರುವಾಸಿಯಾಗಿದೆ. ಕೃಷಿ ಬೆಳೆಗಳು ಕಣ್ಮರೆಯಾಗುತ್ತಿರುವುದು ಇನ್ನೊಂದು ರೀತಿಯಲ್ಲಿ ಆತಂಕ ಮೂಡಿಸುತ್ತದೆ. ಆದ್ದರಿಂದ ಕೆರೆಕಟ್ಟೆಗಳನ್ನು ಉಳಿಸುವಲ್ಲಿ ಪ್ರತಿಯೊಬ್ಬರೂ ಯತ್ನಿಸಬೇಕು ಎಂದರು.
ಸೊಲ್ಲಾಪುರದ ಶ್ರೀ ಸಿದ್ದಾರಮೇಶ್ವಸ್ವಾಮಿ, ಬಿ.ಕೋಡಿಹಳ್ಳಿ ಶ್ರೀ ರಂಗನಾಥಸ್ವಾಮಿ, ಶ್ರೀ ಅಂತರಘಟ್ಟಮ್ಮ ದೇವಿಯವರ ಸಮ್ಮುಖದಲ್ಲಿ ಬಾಗಿನ ಸಮರ್ಪಿಸಲಾಯಿತು. ಮುಖಂಡರಾದ ಕೆ.ಆರ್.ಪ್ರದೀಪ್, ಚಿದಾನಂದ, ಸುಧಾಕರ್, ಕಲ್ಲೇಶ, ಸಂತೋಷ, ಉಮೇಶ್, ಕುಮಾರ್, ಪ್ರಕಾಶ, ಪರಮೇಶ, ಮೂರ್ತಪ್ಪ, ಮಂಜು, ವಿನೋದ ಇತರರಿದ್ದರು.