ಜಿಲ್ಲೆ

ದೇಗುಲದ ಹುಂಡಿ ಕಳ್ಳತನಕ್ಕೆ ಯತ್ನ


ಪಾಂಡವಪುರ: ತಾಲೂಕಿನ ಕನಗನಹಳ್ಳಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ದೇವಸ್ಥಾನಕ್ಕೆ ನುಗ್ಗಿ ಕಾಣಿಕೆ ಹುಂಡಿ ಕದಿಯಲು ಯತ್ನಿಸುತ್ತಿದ್ದ ಕಳ್ಳನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸೋಮವಾರ ತಡರಾತ್ರಿ ಸುಮಾರು 1.30ರಲ್ಲಿ ಗ್ರಾಮದ ದೈವ ವೀರಾಂಜನೇಯಸ್ವಾಮಿ ದೇವಸ್ಥಾನದ ಮುಖ್ಯದ್ವಾರವನ್ನು ಕಬ್ಬಿಣದ ರಾಡ್‌ನಿಂದ ಮೀಟಿ ಒಳ ಹೊಕ್ಕಿದ್ದ ನಾಲ್ವರ ತಂಡ, ದೇವರ ಗರ್ಭಗುಡಿ ಮುಂದಿದ್ದ ಹುಂಡಿ ಒಡೆದು ಅದರಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನು ದೋಚಲು ಯತ್ನಿಸಿದ್ದಾರೆ. ಈ ವೇಳೆ ದೇವಸ್ಥಾನದಲ್ಲಿ ಹುಂಡಿ ಡಬ್ಬದ ಶಬ್ದವನ್ನು ಗ್ರಹಿಸಿ ಹೊರ ಬಂದ ಗ್ರಾಮದ ಕೆಲವರಿಗೆ ದೇವಸ್ಥಾನಕ್ಕೆ ಕನ್ನ ಹಾಕುತ್ತಿರುವುದು ಗೊತ್ತಾಗಿದೆ. ಆ ಕೂಡಲೇ ಗ್ರಾಮದ ಹತ್ತಾರು ಯುವಕರು ಒಗ್ಗೂಡಿ ದೇಗುಲದ ಬಳಿ ತೆರಳಿ ಧೈರ್ಯದಿಂದ ಖದೀಮರನ್ನು ಹಿಡಿಯಲು ಮುಂದಾದರು. ಈ ವೇಳೆ ನಾಲ್ವರು ಕಳ್ಳರ ಪೈಕಿ ಮೂವರು ತಪ್ಪಿಸಿಕೊಂಡು ಪರಾರಿಯಾದರು.

ಮೈಸೂರು ಮೂಲದ ಮುಬಾರಕ್ ಎಂಬಾತನನ್ನು ಹಿಡಿದ ಗ್ರಾಮಸ್ಥರು, ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಳ್ಳನನ್ನು ಬಂಧಿಸಿ ಠಾಣೆಗೆ ಕರೆದೊಯ್ದರು.

ಗ್ರಾಮದ ಸುತ್ತಮುತ್ತಲಿನ ದೇವಸ್ಥಾನಗಳಲ್ಲಿ ಇದೇ ರೀತಿ ಕಳ್ಳತನ ಪ್ರಕರಣಗಳು ನಡೆದಿದ್ದು, ಈ ಹಿಂದೆ ನಡೆದಿರುವ ಕಳ್ಳತನಕ್ಕೂ ಬಂಧಿತ ಕಳ್ಳನಿಗೂ ಏನಾದರೂ ಸಂಬಂಧ ಇದೆಯಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು. ತಪ್ಪಿಸಿಕೊಂಡಿರುವ ಕಳ್ಳರನ್ನು ತಕ್ಷಣವೇ ಬಂಧಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.