ನಂಜನಗೂಡು: ಶ್ರೀಕಂಠೇಶ್ವರಸ್ವಾಮಿ ಗೌತಮ ಪಂಚ ಮಹಾರಥೋತ್ಸವವನ್ನು ಭಾನುವಾರ ಮುಂಜಾನೆ ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಭಾಗದಿಂದ ಶನಿವಾರ ಸಂಜೆಯೇ ಸಾಗರೋಪಾದಿಯಲ್ಲಿ ಆಗಮಿಸುತ್ತಿರುವ ಭಕ್ತರು ದೇವಾಲಯದ ಆವರಣದಲ್ಲಿ ಬೀಡು ಬಿಟ್ಟಿದ್ದಾರೆ.
ಸಂಜೆಯಾಗುತ್ತಿದ್ದಂತೆ ದೇವಾಲಯದ ಕೈಸಾಲೆ, ಸಮುಚ್ಚಯ, ಕಲಾ ಮಂದಿರ, ಗಿರಿಜಾ ಕಲ್ಯಾಣ ಮಂಟಪ, ಡಾರ್ಮೆಟರಿಯಲ್ಲೆಲ್ಲಾ ಭಕ್ತಗಣದಿಂದ ತುಂಬಿ ಹೋಗಿತ್ತು. ವಾಸ್ತವ್ಯ ಹೂಡಲು ಸೂಕ್ತ ಸ್ಥಳವಕಾಶ ಸಿಗದ ಭಕ್ತರು ದೇವಾಲಯದ ಮುಂಭಾಗದ ಆವರಣದಲ್ಲೇ ಠಿಕಾಣಿ ಹೂಡಿದ್ದಾರೆ.
ರಥೋತ್ಸವ ಮುನ್ನ ದೇವಾಲಯದ ಸುತ್ತ ಉರುಳು ಸೇವೆ ಮಾಡಿ ಕಪಿಲಾ ಸ್ನಾನಘಟ್ಟದಲ್ಲಿ ಪುಣ್ಯಸ್ನಾನ ಮಾಡುವಲ್ಲಿ ಭಕ್ತರು ತಲ್ಲೀನರಾಗಿದ್ದರು. ಬಳಿಕ ಶ್ರೀಕಂಠೇಶ್ವರ ಸ್ವಾಮಿ ದರ್ಶನ ಪಡೆದರು.
ಬೆಂಗಳೂರು, ಮಂಡ್ಯ ಸೇರಿದಂತೆ ರಾಜ್ಯದ ನಾನಾ ಭಾಗದಿಂದ ಹೆಚ್ಚಿನ ಭಕ್ತರು ರೈಲಿನಲ್ಲಿ ಆಗಮಿಸಿದರು. ಖಾಸಗಿ ವಾಹನದಲ್ಲಿ ಬಂದಿರುವ ಭಕ್ತರು ಲಿಂಗಣ್ಣನ ಛತ್ರ, ಅಯ್ಯಪ್ಪಸ್ವಾಮಿ ದೇವಾಲಯ ಸೇರಿದಂತೆ ಆಯಕಟ್ಟಿನ ಪ್ರದೇಶದಲ್ಲಿ ಬಿಡಾರ ಹೂಡಿದ್ದಾರೆ.
ದೇವಾಲಯದ ದಾಸೋಹ ಭವನದಲ್ಲಿ ಶನಿವಾರ ರಾತ್ರಿ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಭಕ್ತಿ ಮಾರ್ಗ, ಮೋಕ್ಷ ಮಾರ್ಗಗಳಲ್ಲಿ ತಾತ್ಕಾಲಿಕ ಟೆಂಟ್ ಅಂಗಡಿಗಳು ತಲೆ ಎತ್ತಿದ್ದು, ವ್ಯಾಪಾರ ಜೋರಾಗಿದೆ. ರಾತ್ರಿಯಿಡಿ ಭಕ್ತರು ದೇವಾಲಯದ ಆವರಣದಲ್ಲಿ ವಾಸ್ತವ್ಯ ಹೂಡಿರುವುದರಿಂದ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ರಥಗಳು ಸಾರಾಗವಾಗಿ ಸಾಗಲು ರಥಬೀದಿಯಲ್ಲಿ ಶನಿವಾರ ಸಂಜೆ ಮರಳು ಹರಡುವಲ್ಲಿ ನಗರಸಭೆ ಸಿಬ್ಬಂದಿ ನಿರತರಾಗಿದ್ದರು. ಹಾಗೆಯೇ ರಥಬೀದಿ ಸುತ್ತ ವಾಹನಗಳು ಸುಳಿಯದಂತೆ ಬ್ಯಾರಿಕೇಡ್ ವ್ಯವಸ್ಥೆ ಮಾಡಿ ಬಂದೋಬಸ್ತ್ ಕೈಗೊಳ್ಳುವಲ್ಲಿ ಪೊಲೀಸರು ತಲ್ಲೀನರಾಗಿದ್ದಾರೆ.
35 ಸಾವಿರ ಬರ್ಫಿ ವಿತರಣೆ ಗುರಿ: ಕಳೆದ 34 ವರ್ಷದಿಂದ ದೊಡ್ಡಜಾತ್ರಾ ಮಹೋತ್ಸವದಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡುತ್ತಾ ಬಂದಿರುವ ಬೆಂಗಳೂರಿನಲ್ಲಿರುವ ಶ್ರೀಕಂಠೇಶ್ವರ ಸೇವಾ ಸಂಘದ ವತಿಯಿಂದ ಈ ಬಾರಿ ಒಣದ್ರಾಕ್ಷಿ, ಗೋಡಂಬಿ, ಬಾದಾಮಿಯಿಂದ ಮಾಡಿರುವ 35 ಸಾವಿರ ಡ್ರೈಫ್ರೂಟ್ಸ್ ಬರ್ಫಿ ವಿತರಿಸುವ ಗುರಿ ಹೊಂದಲಾಗಿದ್ದು, ಅದಕ್ಕಾಗಿ ತಯಾರಿ ಜೋರಾಗಿದೆ.
ರಥಬೀದಿಯಲ್ಲಿರುವ ಭಾರತಿತೀರ್ಥ ಸಭಾಂಗಣದಲ್ಲಿ 50ಕ್ಕೂ ಹೆಚ್ಚು ಬಾಣಸಿಗರು ಈ ಸಿಹಿಖಾದ್ಯ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಥೋತ್ಸವ ಬಳಿಕ ಈ ಸಿಹಿಖಾದ್ಯ ಜತೆಗೆ ಪ್ರಸಾದವನ್ನು ವಿತರಿಸಲಾಗುವುದು. ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಆಗಮಿಸುವ ಭಕ್ತರಿಗಾಗಿ ಕಾಮಾಕ್ಷಿ ಕಲ್ಯಾಣ ಮಂಪಟದಲ್ಲಿ ಪ್ರತ್ಯೇಕ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಂಘದವರು ತಿಳಿಸಿದ್ದಾರೆ.
ಉಳಿದಂತೆ ಗ್ರಾಮಲೆಕ್ಕಿಗರ ಸಂಘ, ಬ್ರಾಹ್ಮಣ ಧರ್ಮ ಸಹಾಯ ಸಭಾ, ಆಟೋ ಚಾಲಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ರಥೋತ್ಸವ ಸಂದರ್ಭದಲ್ಲಿ ಪ್ರಸಾದ ವಿತರಣೆ ಮಾಡಲು ಸಿದ್ಧತೆ ಕೈಗೊಂಡಿದ್ದಾರೆ.