ಜಿಲ್ಲೆ

ದೇಗುಲಗಳು ಶಾಂತಿ, ನೆಮ್ಮದಿ ನೀಡುವ ಶ್ರದ್ಧಾಕೇಂದ್ರಗಳು

ಹನೂರು: ದೇಗುಲಗಳು ಶಾಂತಿ ಹಾಗೂ ನೆಮ್ಮದಿ ನೀಡುವ ಧಾರ್ಮಿಕ ಶ್ರದ್ಧಾಕೇಂದ್ರಗಳಾಗಿದ್ದು, ಜನರಲ್ಲಿ ಭಕ್ತಿ ಭಾವವನ್ನು ಮೂಡಿಸುತ್ತವೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ತಾಲೂಕಿನ ರಾಮಾಪುರ ಸಮೀಪದ ಸಂಕನಪುರ ಗ್ರಾಮದಲ್ಲಿ ಸೋಮವಾರ ಗ್ರಾಮದೇವತೆ ಮಾರಮ್ಮನ ದೇಗುಲ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಮಾತನಾಡಿದರು.

ಜನರಿಗೆ ಕಷ್ಟ ಕಾರ್ಪಣ್ಯಗಳು ಎದುರಾದಾಗ ಹಾಗೂ ಶುಭ ಕಾರ್ಯಗಳನ್ನು ಕೈಗೊಳ್ಳಬೇಕಾದರೆ ದೇವರು ಹಾಗೂ ದೇಗುಲಗಳ ಮೊರೆ ಹೋಗುತ್ತಾರೆ. ಪೂಜೆ ಪುನಸ್ಕಾರದಲ್ಲಿ ಭಾಗಿಯಾಗುತ್ತಾರೆ. ದೇವರು ಒಳಿತನ್ನು ಕರುಣಿಸುತ್ತಾರೆ ಎಂಬ ನಂಬಿಕೆ ಜನರಲ್ಲಿದೆ. ಇನ್ನು ಗ್ರಾಮಗಳಲ್ಲಿನ ದೇಗುಲಗಳು ಧಾರ್ಮಿಕ ಶ್ರದ್ಧಾಕೇಂದ್ರಗಳಾಗಿದ್ದು, ಗ್ರಾಮದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಬ್ಬ ಹರಿದಿನಗಳಂದು ಜನರಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸ್ನೇಹ ಬಾಂಧವ್ಯವನ್ನು ವೃದ್ಧಿಸುತ್ತವೆ. ಇದಕ್ಕೆ ಗ್ರಾಮದಲ್ಲಿ ಮಾರಮ್ಮನ ದೇಗುಲವನ್ನು ನಿರ್ಮಿಸುತ್ತಿರುವುದು ಪೂರಕವಾಗಿದೆ. ಆದ್ದರಿಂದ ಹಿರಿಯರ ಮಾರ್ಗದರ್ಶನದಲ್ಲಿ ಎಲ್ಲರೂ ಧಾರ್ಮಿಕ ಸಂಪ್ರದಾಯವನ್ನು ಪಾಲಿಸಬೇಕು. ಗ್ರಾಮದಲ್ಲಿ ಒಗ್ಗಟ್ಟನ್ನು ಕಾಯ್ದುಕೊಳ್ಳುವುದರ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು. ದೇಗುಲದ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಕೊಡಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು. ಜತೆಗೆ ಗ್ರಾಮದ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿ ಶಾಸಕರನ್ನು ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು. ಕಾರ್ಯಕ್ರಮದಲ್ಲಿ ಶಾಸಕರನ್ನು ಸನ್ಮಾನಿಸಲಾಯಿತು.

ಕೆಪಿಸಿಸಿ ಸದಸ್ಯ ರಾಮಾಪುರ ಬಸವರಾಜು, ತಾಪಂ ಮಾಜಿ ಅಧ್ಯಕ್ಷ ರಾಜೇಂದ್ರ, ಗ್ರಾಪಂ ಸದಸ್ಯೆ ಜಮಿನಿ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಪಮಾಲೆ, ಮುಖಂಡರಾದ ಮಹದೇವ, ಶ್ರೀರಂಗ, ಶ್ರೀನಿವಾಸ್, ಶೇಖರ್, ತಂಗವೇಲು, ಮುತ್ತುಮಾದ, ಅಪ್ಪುಸ್ವಾಮಿ, ಕೃಷ್ಣಮೂರ್ತಿ, ಮುತ್ತುರಾಜಮ್ಮ ಮತ್ತಿತರರು ಹಾಜರಿದ್ದರು.