ಜಾತ್ರಾ ಮಹೋತ್ಸವಗಳಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿದ ಶ್ರೀರಾಮ ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು. ಪ್ರಮೋದ ಮುತಾಲಿಕ್, ರವಿ ಕೋಕಿತ್ಕರ್, ವಿನಯ ಅಂಗ್ರೊಳಿ ಸೇರಿದಂತೆ ಶ್ರೀರಾಮ ಸೇನೆ ಕಾರ್ಯಕರ್ತರು ಇದ್ದರು. 
ಜಿಲ್ಲೆ

ದೇಗುಲಗಳ ಜಾತ್ರಾ ಮಹೋತ್ಸವಕ್ಕೆ ಅನುಮತಿ ನೀಡಿ

ಬೆಳಗಾವಿ: ಕರೊನಾ 3ನೇ ಅಲೆ ತೀವ್ರತೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಹುತೇಕ ಎಲ್ಲ ನಿರ್ಬಂಧ ಹಿಂಪಡೆಯಲಾಗಿದೆ. ಹೀಗಾಗಿ ದೇವಸ್ಥಾನ, ಮಠ ಮುಂತಾದ ಧಾರ್ಮಿಕ ಸ್ಥಳಗಳಲ್ಲಿ ಜಾತ್ರಾ ಮಹೋತ್ಸವಕ್ಕೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟಿಸಿದರು. ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷದಿಂದ ಮಠ-ಮಂದಿರಗಳ ಜಾತ್ರಾ ಮಹೋತ್ಸವಕ್ಕೆ ಅವಕಾಶವಿರಲಿಲ್ಲ. ಆದರೆ, ಈ ವರ್ಷ ಕೋವಿಡ್ ನಿಯಂತ್ರಣದ ಎಲ್ಲ ನಿರ್ಬಂಧ, ನಿರ್ದೇಶನಗಳನ್ನು ಸರ್ಕಾರ ಹಿಂಪಡೆದಿದೆ. ಆದರೂ ದೇವಸ್ಥಾನ, ಮಠಗಳ ಜಾತ್ರಾ ಮಹೋತ್ಸವಕ್ಕೆ ಅನುಮತಿ ನೀಡದಿರುವುದು ನೋವಿನ ಸಂಗತಿಯಾಗಿದೆ ಎಂದರು.

ಜಾತ್ರಾ ಮಹೋತ್ಸವಗಳು ಸೌಹಾರ್ದತೆ, ಏಕತೆಯ ಜತೆಗೆ ಧಾರ್ಮಿಕತೆಯ ಹೆಗ್ಗುರುತು. ಅಲ್ಲದೆ ರೈತರ, ಕಲಾವಿದರ, ವ್ಯಾಪಾರಿಗಳ, ಹೂ-ಹಣ್ಣು ಮಾರಾಟಗಾರರ ಆದಾಯದ ಮೂಲವೂ ಆಗಿದೆ. ಆದರೆ, ಜಾತ್ರೆ ರದ್ದು ಮಾಡಿರುವುದು ಅವರ ಹೊಟ್ಟೆ ಮೇಲೆ ಹೊಡೆದಂತಾಗಿದ್ದು, ಜೀವನ ದುಸ್ತರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೋವಿಡ್
ನಿಯಂತ್ರಣ ಮಾರ್ಗಸೂಚಿಯನ್ವಯವೇ ಜಾತ್ರಾ ಮಹೋತ್ಸವ ಜರುಗುವಂತೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್, ಜಿಲ್ಲಾ ಕಾರ್ಯದರ್ಶಿ ವಿನಯ ಅಂಗ್ರೊಳಿ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.