ಎನ್.ಆರ್.ಪುರ: ದೇವಸ್ಥಾನಗಳು ಹಿಂದುಗಳ ಶ್ರದ್ಧಾ ಕೇಂದ್ರ. ದೇವಾಲಯಗಳನ್ನು ಹೆಚ್ಚು ಅಭಿವೃದ್ಧಿಪಡಿಸಬೇಕು ಎಂಬುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉದ್ದೇಶ ಎಂದು ಕೊಪ್ಪ, ಎನ್.ಆರ್.ಪುರ ತಾಲೂಕಿನ ಯೋಜನಾಧಿಕಾರಿ ನಿರಂಜನ್ ಹೇಳಿದರು.
ಶೆಟ್ಟಿಕೊಪ್ಪ ವಲಯದ, ಕಳ್ಳಿಕೊಪ್ಪ ಕಾರ್ಯಕ್ಷೇತ್ರದ ಬಡಗಬೈಲು ಗ್ರಾಮದ ಕಣಿಗೇರಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಧರ್ಮಸ್ಥಳ ದಿಂದ ನೀಡಿದ 50 ಸಾವಿರ ಸಹಾಯ ಧನದ ಚೆಕ್ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಲ ನೀಡುವುದು, ಸಾಲ ವಸೂಲಾತಿ ಮಾಡುವುದಕ್ಕೆ ಸೀಮಿತವಾಗಿಲ್ಲ. ಸಮಾಜ ಸೇವೆಯಲ್ಲೂ ಮುಂಚೂಣಿಯಲ್ಲಿದೆ. ಪುರಾತನ ಹಾಗೂ ಶಿಥಿಲಾವಸ್ಥೆ ತಲುಪಿದ ದೇವಾಲಯಗಳ ಜೀರ್ಣೋದ್ಧಾರಕ್ಕೂ ನೆರವು ನೀಡುತ್ತಿದೆ ಎಂದರು.
ಮೆಣಸೂರು ಗ್ರಾಪಂ ಸದಸ್ಯ ಡಿ.ಆರ್.ಶ್ರೀನಾಥ್ ಮಾತನಾಡಿ, ದೇವಸ್ಥಾನ ಸಮಿತಿ ಮನವಿಗೆ ಡಾ. ವೀರೇಂದ್ರ ಹೆಗ್ಡೆ ಸ್ಪಂದಿಸಿ, ಸಹಾಯಧನ ನೀಡಿದ್ದಾರೆ. ಅವರಿಗೆ ದೇವಸ್ಥಾನ ಸಮಿತಿ, ಗ್ರಾಮಸ್ಥರು ಚಿರಋಣಿಯಾಗಿದ್ದಾರೆ ಎಂದರು.
ಒಕ್ಕೂಟದ ಅಧ್ಯಕ್ಷ ಅರುಣಕುಮಾರ್, ಮಾಜಿ ಅಧ್ಯಕ್ಷ ಎಲ್ದೋ, ಮೇಲ್ವಿಚಾರಕ ಸತೀಶ್, ಎನ್.ಆರ್.ನಾಗರಾಜ್, ಕೆ.ಆರ್.ಮಂಜುನಾಥ, ಕೆ.ಎಸ್.ಚಂದ್ರಶೇಖರ್, ಚೇತನ್, ಕುಮಾರನಾಯಕ್, ಸಿ.ಪಿ.ಮಂಜುನಾಥ್, ಪುರುಷೋತ್ತಮ, ವೆಂಕಟೇಶ್, ಸಂತೋಷ್, ಸಂಜಯ್, ಅಳಲಗೆರೆ ರಮೇಶ್, ಸೀತಮ್ಮ, ಸುಕುಮಾರ್, ಸೇವಾಪ್ರತಿನಿಧಿಗಳು ಇದ್ದರು.