ಹನೂರು: ಗ್ರಾಮದ ಸಮಸ್ಯೆಗಳನ್ನು ಬಗೆಹರಿಸುವುದರ ಮೂಲಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ತಾಲೂಕಿನ ದೊಮ್ಮನಗದ್ದೆ ಗ್ರಾಮದಲ್ಲಿ ಬುಧವಾರ ಬಂಜಾರ ಸಮುದಾಯದ ಶ್ರೀ ಮಾರಮ್ಮ ದೇಗುಲದ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಕಳೆದ ತಿಂಗಳು ಗ್ರಾಮದಲ್ಲಿ ಅಧಿಕಾರಿಗಳ ಸಭೆ ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ, ಕಾರಣಾಂತರದಿಂದ ಸಭೆ ನಡೆಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಮುಂದಿನ ದಿನಗಳಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು. ಅಲ್ಲದೆ, ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ ಚಿಂತನೆ ನಡೆಸಲಾಗಿದ್ದು, ಅಗತ್ಯ ಕ್ರಮ ವಹಿಸಲಾಗಿದೆ. ದೇಗುಲ ನಿರ್ಮಾಣಕ್ಕೆ ಆರಾಧನಾ ಯೋಜನೆಯಡಿ ಅನುದಾನ ಹಾಗೂ ವೈಯಕ್ತಿಕವಾಗಿ ಧನಸಹಾಯ ನೀಡಲಾಗುವುದು ಎಂದು ಭರವಸೆ ನೀಡಿದರು.
ಶಿಕ್ಷಕ ಶಾಂತರಾಜು ಮಾತನಾಡಿ, ಗ್ರಾಮದಲ್ಲಿ ರಾಮಮಂದಿರ ಹೊರತುಪಡಿಸಿದರೆ ಸೇವಾಲಾಲ್ ಸಮುದಾಯ ಭವನ ಹಾಗೂ ದೇಗುಲ ನಿರ್ಮಾಣಕ್ಕೆ ಸರ್ಕಾರದಿಂದ ಯಾವುದೇ ಅನುದಾನ ದೊರೆತಿಲ್ಲ. ಈಗಾಗಲೇ 35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ದೇಗುಲ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಸಮುದಾಯದ ವತಿಯಿಂದ 5 ಲಕ್ಷ ರೂ. ಸಂಗ್ರಹಿಸಲಾಗಿದೆ. ಗ್ರಾಮದ ಶಾಲೆಯನ್ನು ಅಭಿವೃದ್ಧಿಪಡಿಸಬೇಕು. ಎಸ್‌ಸಿಪಿ ಯೋಜನೆಯಡಿ ಗ್ರಾಮಕ್ಕೆ ಸೌಕರ್ಯ ಕಲ್ಪಿಸಬೇಕು. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿ ಕೊಡುವಂತೆ ಮನವಿ ಮಾಡಿದರು.
ಇದೇ ವೇಳೆ ಶ್ರೀ ಸೇವಾಲಾಲ್ ಬಂಜಾರ ಸೇವಾ ಸಮಿತಿಯನ್ನು ಉದ್ಘಾಟಿಸಲಾಯಿತು. ಮೈಮುಲ್ ನಿರ್ದೇಶಕ ಮಹದೇವಪ್ರಸಾದ್, ಪ್ರಾಂಶುಪಾಲ ಶಾಂತರಾಜು, ಸಿಆರ್‌ಪಿ ಕೃಷ್ಣ, ಗ್ರಾಪಂ ಅಧ್ಯಕ್ಷ ರುದ್ರನಾಯ್ಕ, ಮುಖಂಡರಾದ ರಾಜನಾಯ್ಕ, ಸಿದ್ದನಾಯ್ಕ, ಮಾದಪ್ಪ, ಸೀನನಾಯ್ಕ, ಕಣ್ಣಪ್ಪಯ್ಯ, ಪ್ರಭು, ಕುಮಾರನಾಯ್ಕ ಇದ್ದರು.