ಜಿಲ್ಲೆ

ದೇಗುಲ ದಾಖಲೆ ಸಲ್ಲಿಸಿ, ತಹಸೀಲ್ದಾರ್ ಕೆ.ಮಂಜುನಾಥ್ ಸೂಚನೆ, ನೆಲಮಂಗಲದಲ್ಲಿ ತಾಲೂಕು ಆರಾಧನ ಸಮಿತಿ ಸಭೆ

ನೆಲಮಂಗಲ: ತಾಲೂಕಿನಲ್ಲಿ ರಸ್ತೆ ಬದಿಯಲ್ಲಿನ ದೇಗುಲ ತೆರವಿಗೆ ಆದೇಶವಾಗಿರುವ 19 ದೇವಾಲಯಗಳ ದಾಖಲೆ ಪತ್ರಗಳನ್ನು ಆದಷ್ಟು ಬೇಗ ತಾಲೂಕು ಆಡಳಿತಕ್ಕೆ ನೀಡಬೇಕು ಎಂದು ತಹಸೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆರಾಧನ ಸಮಿತಿ ಶುಕ್ರವಾರ ದೇವಾಲಯ ತೆರವು ಕುರಿತ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.

ದೇವಾಲಯದ ನೋಂದಣಿ, ಗ್ರಾಪಂ ಅಥವಾ ನಗರಸಭೆಯಿಂದ ನೀಡಿರುವ ಅನುಮತಿ ಹಾಗೂ ದಾಖಲೆಪತ್ರ ನೀಡಬೇಕು. ತೆರವು ಪಟ್ಟಿಯಲ್ಲಿರುವ 19 ದೇವಾಲಯಗಳ ಪೈಕಿ ಕೆಲ ದೇವಾಲಯಗಳು ಮಾತ್ರ ದಾಖಲೆಪತ್ರ ನೀಡಿದ್ದಾರೆ. ಉಳಿಕೆ ದೇವಾಲಯಗಳು ಶನಿವಾರ (ಆ.7) ತಾಲೂಕು ಕಚೇರಿ ನೀಡಬೇಕು. ಇಲ್ಲವಾದಲ್ಲಿ ತೆರವು ಮಾಡಲಾಗುವುದು ಎಂದರು.

ಈಗಾಗಲೇ 1 ದೇವಾಲಯವನ್ನು ತೆರವುಗೊಳಿಸಿದ್ದು, 2 ದೇಗುಲಗಳನ್ನು ದೇವಾಲಯ ಆಡಳಿತ ಮಂಡಳಿಯೇ ಸ್ವಯಂ ಪ್ರೇರಿತರಾಗಿ ತೆರವು ಮಾಡಿದ್ದಾರೆ ಎಂದರು.

ನ್ಯಾಯಾಲಯದ ಮೊರೆ: ತೆರವಿಗೆ ಆದೇಶ ನೀಡಿರುವ 19 ದೇವಾಲಯಗಳ ಪೈಕಿ 15 ದೇವಾಲಯದ ಸಮಿತಿ ಮುಖಂಡರು, ತೆರವು ಕಾರ್ಯಾಚರಣೆ ಕೈಬಿಡುವಂತೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ತಿಳಿಸಿದರು. ಆದ್ದರಿಂದ ಮುಂದಿನ ವಾರ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಧಾರ್ಮಿಕ ಪರಿಷತ್ ದೇವಾಲಯ ತೆರವು ಸಂಬಂಧಿಸಿದಂತೆ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಅಲ್ಲಿಯವರೆಗೂ ತಾತ್ಕಲಿಕವಾಗಿ ತೆರವು ಕಾರ್ಯ ಸ್ಥಗಿತಗೊಳಿಸಬೇಕು ಎಂದು ಮನವಿ ಮಾಡಿದರು.

ದೇವಾಲಯ ಸಮಿತಿಗೆ ನ್ಯಾಯಾಲದ ಮೊರೆ ಹೋಗಲು ಅವಕಾಶ ನೀಡಬೇಕು. ತಾಲೂಕಿನಾದ್ಯಂತ ತೆರವು ಮಾಡುವ ದೇವಾಲಯ ಪಟ್ಟಿ ಮಾಡಿರುವುದು ತಪ್ಪಾಗಿದೆ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಎಂ.ಎನ್.ರಾಮ್ ತಿಳಿಸಿದರು.

ಸುಪ್ರೀಂಕೋರ್ಟ್ ಆದೇಶದಂತೆ 2009 ನಂತರದ ನಿರ್ಮಾಣದ ದೇವಾಲಯ ತೆರವು ಗೊಳಿಸಬೇಕು.ಆದರೆ ಪಟ್ಟಿ ಮಾಡಿರುವ ದೇವಾಲಯಗಳು ಸುಮಾರು ನಾಲ್ಕೈದು ದಶಕದ ಹಿಂದೆ ನಿರ್ಮಾಣವಾಗಿವೆ. ತಾಲೂಕಿನಲ್ಲಿ ಅನಧಿಕೃತವಾಗಿ ಸುಮಾರು 11 ಮಸೀದಿ ಹಾಗೂ ನಾಲ್ಕೈದು ಚರ್ಚ್‌ಗಳಿದ್ದು, ಮೊದಲು ಅದನ್ನು ತೆರವು ಗೊಳಿಸಬೇಕು. ಆದರೆ ಕೆಲ ಕಿಡಿಗೇಡಿಗಳು ಉದ್ದೇಶ ಪೂರಕವಾಗಿ ಹಿಂದು ದೇವಾಲಯಗಳನ್ನು ಮಾತ್ರ ಪಟ್ಟಿ ಮಾಡಿರುವುದು ಬೇಸರದ ಸಂಗತಿ ಎಂದರು.

ಅಧಿಕಾರಿಗೆ ತರಾಟೆ: ನೆಲಮಂಗಲ ತಾಲೂಕಿನ 19 ದೇವಾಲಯವನ್ನು ತೆರವು ಮಾಡಲು ಪಟ್ಟಿ ಮಾಡಲಾಗಿದೆ. ಆದರೆ ನಗರಸಭೆ ವ್ಯಾಪ್ತಿಯ ದೇವಾಲಯಕ್ಕೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಒದಗಿಸದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಕೆ.ಮಂಜುನಾಥ್, ನಗರಸಭೆ ಪೌರಾಯುಕ್ತ ಮಂಜುನಾಥ್ ಅವರನ್ನು ತರಾಟೆ ತಗೆದರು.

ಶಿರಸ್ತೇದಾರ್ ಶ್ರೀನಿವಾಸಮೂರ್ತಿ, ವಿಮಲಾ, ರಾಜಸ್ವ ನಿರೀಕ್ಷಕ ಎ.ರವಿಕುಮಾರ್, ತಾಲೂಕು ಆರಾಧನ ಸಮಿತಿ ಸದಸ್ಯರಾದ ಎನ್.ಎಸ್.ಪೂರ್ಣಿಮಸುಗ್ಗರಾಜು, ಮಾರುತಿ, ಮುನಿರಾಜು, ಬಾಲಕೃಷ್ಣ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೆ.ಎಂ.ಜಯರಾಮ್, ತಾಲೂಕು ಮಂದಿರ ಸಂರಕ್ಷಣಾ ಸಮಿತಿ ಸಂಚಾಲಕ ರಾಮಕೃಷ್ಣಯ್ಯ ಮತ್ತಿತರರು ಇದ್ದರು.