ಜಿಲ್ಲೆ

ದೇಗುಲ ಉದ್ಘಾಟನೆ ಸೆ. 1ರ ವರೆಗೆ

ಚಿತ್ರದುರ್ಗ: ಬುರುಜನಹಟ್ಟಿಯ ಉಪ್ಪುನೀರು ಬಾವಿ ರಸ್ತೆಯ ಮೈಲಾರಲಿಂಗೇಶ್ವರ ಸ್ವಾಮಿ, ಗಂಗಾಮಾಳಮ್ಮ ದೇವಿಯ ದೇಗುಲ ಹಾಗೂ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮ ಆ. 30ರಿಂದ ಸೆ. 1ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮೈಲಾರಲಿಂಗೇಶ್ವರ ದೇಗುಲ ಜೀರ್ಣೋದ್ಧಾರ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ. ನಿಶಾನಿ ಜಯಣ್ಣ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಗುಲ ಚಾಲುಕ್ಯರ ಕಾಲದ್ದಾಗಿದ್ದು, ನೂತನವಾಗಿ ನಿರ್ಮಿಸಲಾಗಿದೆ. ಅಲ್ಲದೆ, 2 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಿದ್ದು, 1ರಂದು ಲೋಕಾರ್ಪಣೆಗೊಳ್ಳಲಿದೆ ಎಂದರು.

30ರಂದು ಸಂಜೆ 6ರಿಂದ ಮಹಾಗಣಪತಿ ಪೂಜೆ, ಆಚಾರ್ಯಾದಿ ಋತ್ವಿಕ್ ವರುಣಂ, ಪ್ರಸಾದ-ಸ್ಥಳ ಶುದ್ಧಿ, ರಾಕ್ಷೋಘ್ನ, ಸುದರ್ಶನ, ವಾಸ್ತುಶಾಂತಿ ಹೋಮ, ವಾಸ್ತು ಬಲಿ ಪೂಜೆ ಜರುಗಲಿದೆ. 31ರಂದು ಮಹಾಗಣ ಪ್ರತಿಷ್ಠೆ, ಪುಣ್ಯಾಹ ವಾಚನ, ಮಾತೃಕಾ ಪೂಜೆ, ಪಂಚಗವ್ಯ ಮೇಳನ, ಬಿಂಬಶುದ್ಧಿ, ರಕ್ಷಾ ಬಂಧನ, ಅಧಿವಾಸ ಪೂಜೆ, ಕಲಶಾರಾಧನೆ, ಗ್ರಹಾರಾಧನೆ, ಮಹಾಗಣಪತಿ, ನವಗ್ರಹ ಸೇರಿ ಅನೇಕ ಹೋಮ ನಡೆಯಲಿದೆ. ಸಂಜೆ 6.30ರಿಂದ ಕಲಶಾರಾಧನೆ, ತತ್ವ ಕಲಾ, ಶಯ್ಯದಿವಾಸ, ನಿದ್ರಾಕಲಕ, ಪೀ, ರತ್ನನ್ಯಾಸ, ಅಷ್ಠಬಂದ ಸ್ಥಾಪನೆ ಪೂಜೆಗಳು ನೆರವೇರಲಿವೆ ಎಂದು ಮಾಹಿತಿ ನೀಡಿದರು.

1ರಂದು ಬೆಳಗ್ಗೆ 6ರಿಂದ ಕಳಾನ್ಯಾಸ, ಪ್ರಾಣ ಪ್ರತಿಷ್ಠಾಪನೆ, ನೇತ್ರೋನ್ಮಿಲನ, 7.15ರ ವರೆಗೆ ಸಪರಿವಾರ ಸಹಿತ ಗಂಗಾಮಾಳಮ್ಮ, ಮೈಲಾರಲಿಂಗೇಶ್ವರ ಸ್ವಾಮಿ ಪ್ರತಿಷ್ಠಾಪನೆ ಜರುಗಲಿದೆ. ನಂತರ ರುದ್ರಹೋಮ, ಕಲಶಾಭಿಷೇಕ, ಪುರ್ಣಾಹುತಿ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆಯಾಗಲಿದೆ ಎಂದರು.

ಅಂದಿನ ಧಾರ್ಮಿಕ ಸಭೆಯ ಸಾನ್ನಿಧ್ಯವನ್ನು ನಿರಂಜನಾನಂದಪುರಿ ಶ್ರೀ, ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಶಿವಲಿಂಗಾನಂದ ಶ್ರೀ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸಂಸದ ಗೋವಿಂದ ಎಂ ಕಾರಜೋಳ ಅವರು ಸಮುದಾಯ ಭವನ ಉದ್ಘಾಟಿಸಲಿದ್ದಾರೆ. ಜಿಲ್ಲೆಯ ಶಾಸಕರು, ಎಂಎಲ್ಸಿಗಳು, ನಿಗಮ ಮಂಡಳಿ ಅಧ್ಯಕ್ಷರು, ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಮಿತಿ ಅಧ್ಯಕ್ಷ ಜಿ.ಸಿ.ಸುರೇಶ್‌ಬಾಬು, ಗೌರವಾಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ಪಿ.ಎಸ್.ವಿಜಯಕುಮಾರ್, ನಿರ್ದೇಶಕರಾದ ಶಿವಕುಮಾರ್, ನಾಗರಾಜ್ ಬೇದ್ರೆ, ನಿಂಗರಾಜ್ ಇತರರಿದ್ದರು.