ಖಾನಾಪುರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಹಾದೇವ ಕೋಳಿ ಮಾತನಾಡಿದರು. ಮಧು ಕಾವ್ಲೇಕರ್, ರಿಯಾಜ್ ಅಹ್ಮದ್ ಪಟೇಲ್, ಮಹಾಂತೇಶ ರಾವುತ್, ಸಂಗಮೇಶ ವಾಲಿ ಮತ್ತಿತರರು ಉಪಸ್ಥಿತರಿದ್ದರು. 
ಜಿಲ್ಲೆ

ದೇಗಾಂವ ಯೋಜನೆಗೆ 565 ಕೋಟಿ ಮಂಜೂರು

Belagavi

ಖಾನಾಪುರ: ಶಾಸಕಿ ಡಾ.ನಿಂಬಾಳ್ಕರ್ ಪ್ರಯತ್ನದಿಂದಾಗಿ ದೇಗಾಂವ ನೀರು ಸರಬರಾಜು ಯೋಜನೆಗೆ 565 ಕೋಟಿ ರೂ. ಅನುದಾನ ಮಂಜೂರಾಗಿದೆ. ಬಿಜೆಪಿ ನಾಯಕರು ಉಚಿತವಾಗಿ ಈ ಯೋಜನೆಯ ಶ್ರೇಯ ಪಡೆದುಕೊಳ್ಳಬಾರದು ಎಂದು ತಾಲೂಕು ಕಾಂಗ್ರೆಸ್ ಅಧ್ಯಕ್ಷ ಮಹಾದೇವ ಕೋಳಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎರಡು ದಿನಗಳ ಹಿಂದೆ ಖಾನಾಪುರ ಬಿಜೆಪಿ ನಾಯಕರು ದೇಗಾಂವ ಯೋಜನೆಗೆ ಅನುಮೋದನೆ ಶ್ರಮಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈ ಯೋಜನೆ ಜಾರಿಗೊಳಿಸಿದ್ದೇ ಆಗಿದ್ದರೆ ಒಂದಾದರೂ ಸಾಕ್ಷಿ ನೀಡಲಿ ಎಂದು ಸ್ಥಳೀಯ ಬಿಜೆಪಿ ಮುಖಂಡರಿಗೆ ಸವಾಲು ಹಾಕಿದರು.

ಯೋಜನೆ ಅನುಷ್ಠಾನಕ್ಕೆ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರು 2018 ರಿಂದ ನಿರಂತರ ಪ್ರಯತ್ನ ನಡೆಸುತ್ತಿದ್ದರು. ಮೊದಲು ತಾಲೂಕಿನ ನಂದಗಡ, ಬೀಡಿ ಮತ್ತು ಮೋದೆಕಾಪ ಎಂಬ ಮೂರು ಬಹುಗ್ರಾಮ ನೀರಿನ ಯೋಜನೆಗಳನ್ನು ಪ್ರಸ್ತಾಪಿಸಿದ್ದರು. ಈ ಯೋಜನೆಗೆ ಅಧಿಕಾರಿಗಳು 250 ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಿದ್ದರು. ಈ ಯೋಜನೆಯಲ್ಲಿ ನೀರಿನ ಮೂಲವನ್ನು ಪರಿಗಣಿಸಿಲ್ಲ. ಆದ್ದರಿಂದ ಈ ಯೋಜನೆ ಸಲವಾಗುವುದಿಲ್ಲ. 24ಗಿ7 ಗಂಟೆ ನೀರು ಪೂರೈಸುವ ರೀತಿಯಲ್ಲಿ ಜಲಮೂಲವನ್ನು ಸೇರಿಸಿ ಯೋಜನೆ ಸಿದ್ಧಪಡಿಸುವಂತೆ ಎಂದು ಡಾ.ಅಂಜಲಿ ನಿಂಬಾಳ್ಕರ್ ಸೂಚಿಸಿದ್ದರು. ಆದ್ದರಿಂದ, ಪರಿಷ್ಕೃತ ಯೋಜನೆಯು ಜಲಜೀವನ್ ಮಿಷನ್ ಅಡಿಯಲ್ಲಿ ಹಳೆಯ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪ್ರಸ್ತಾವನೆಯಲ್ಲಿ ಗ್ರಾಮಗಳನ್ನು ಸೇರಿಸಿದೆ. ತಾಲೂಕಿನ 31 ಗ್ರಾಮ ಪಂಚಾಯಿತಿ ವ್ಯಾಪ್ತಿಯ 136 ಗ್ರಾಮಗಳಿಗೆ 24 ಗಂಟೆ ನೀರು ಪೂರೈಕೆಯಾಗಲಿದ್ದು, ಬಿಜೆಪಿ ಸರ್ಕಾರ ಮಂಜೂರಾತಿ ಬಿಟ್ಟರೆ ಬೇರೇನೂ ಮಾಡಿಲ್ಲ ಎಂದು ದೂರಿದರು.

ಮಧು ಕವ್ಲೇಕರ್ ಮಾತನಾಡಿ, ಮಾಜಿ ಶಾಸಕ ಅರವಿಂದ ಪಾಟೀಲ ಅವರ ಅಧಿಕಾರ ಅವಧಿಯಲ್ಲಿ ಏನು ಮಾಡಿದ್ದಾರೆ ಎಂಬುದಕ್ಕೆ ಮೊದಲು ಸಾರ್ವಜನಿಕರಿಗೆ ಉತ್ತರಿಸಬೇಕು. ಬಳಿಕ ಕಾಂಗ್ರೆಸ್ ಶಾಸಕರ ಕೆಲಸದ ಕುರಿತು ಮಾತನಾಡುವ ಧೈರ್ಯ ತೋರಿಸಬೇಕು. ತಾಲೂಕಿನ ಶಾಲೆಗಳ ದುಸ್ಥಿತಿ ಕುರಿತು ಶಾಸಕಿ ಡಾ.ಅಂಜಲಿ ಸ್ವತಃ ಶಿಕ್ಷಣ ಸಚಿವ ನಾಗೇಶ ಅವರ ಗಮನಕ್ಕೆ ತಂದು, 154 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಹಣ ನೀಡಬೇಕು ಎಂದು ಒತ್ತಾಯಿಸಿದರು. ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅರಣ್ಯ ಪ್ರದೇಶದಲ್ಲಿ ರಸ್ತೆ, ಸೇತುವೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ವಿರೋಧ ವ್ಯಕ್ತಪಡಿಸುತ್ತಿದೆ. ತಾಲೂಕಿನಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳಿಗೆ ಅನುಮೋದನೆ ನೀಡುವಂತೆ ಶಿಕ್ಷಣ, ಅರಣ್ಯ ಸಚಿವರನ್ನು ಬಿಜೆಪಿ ಮುಖಂಡರು ಒತ್ತಾಯಿಸಬೇಕು ಎಂದರು. ರಿಯಾಜ್ ಅಹ್ಮದ್ ಪಟೇಲ್, ವಿಜಯಕುಮಾರ ಸಾಣಿಕೋಪ, ಸಂಗಮೇಶ ವಾಲಿ, ದೀಪಕ ಕವಟಣಕರ, ಮಹಾದೇಶ ಸಂಬರಗಿ, ಗೀತಾ ಅಂಬಡಗಟ್ಟಿ, ಬಾಬಾಸಾಹೇಬ ನಂದಗಡಿ, ರಾಮು ಚೌರಿ, ರಾಯಪ್ಪ ಬಳಗಪನವರ ಇತರರು ಇದ್ದರು.