ಜಗದೀಶ ಹೊಂಬಳಿ ಬೆಳಗಾವಿ
ಮೂರು ತಾಲೂಕುಗಳ 133 ಹಳ್ಳಿಗಳಿಗೆ ಕುಡಿಯುವ ನೀರು ಕಲ್ಪಿಸುವ ಮಹತ್ವಾಕಾಂಕ್ಷಿ ಬೈಲಹೊಂಗಲ ತಾಲೂಕಿನ ‘ದೇಗಾಂವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ’ಯು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಇಚ್ಛಾಶಕ್ತಿ ಕೊರತೆಯಿಂದ ಕುಂಟುತ್ತ ಸಾಗಿದೆ.
ಖಾನಾಪುರ, ಬೈಲಹೊಂಗಲ, ಕಿತ್ತೂರು ತಾಲೂಕಿನ ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದನ್ನು ಮನಗಂಡು ಸರ್ಕಾರ ನೀರು ಪೂರೈಸುವುದಕ್ಕೆ ಯೋಜನೆ ರೂಪಿಸಿ ಹಣ ಬಿಡುಗಡೆ ಮಾಡಿದೆ. ಆದರೆ, ಕಾಲಮಿತಿ ಮುಗಿದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ 133 ಗ್ರಾಮಗಳ ಜನರು ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2023ರ ಮಾರ್ಚ್ ತಿಂಗಳಲ್ಲಿ ಕಾಮಗಾರಿ ಆರಂಭಿಸುವುದಕ್ಕೆ ಕಾರ್ಯಾದೇಶ ನೀಡಿ, ಒಂಭತ್ತು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಗಡುವು ವಿಧಿಸಿತ್ತು. ಆದರೆ, ಈವರೆಗೆ ಶೇ.50 ಮಾತ್ರ ಕಾಮಗಾರಿಯಾಗಿದೆ. ಬೇರೆ ಬೇರೆ ಇಲಾಖೆ ವ್ಯಾಪ್ತಿಯಲ್ಲಿ ಪೈಪ್‌ಲೈನ್ ಅಳವಡಿಸುವುದಕ್ಕೆ ಸಮರ್ಪಕವಾಗಿ ಸಮನ್ವಯ ಸಾಧಿಸದ ಕಾರಣ ಜಾಗ ಹಸ್ತಾಂತರ ಮಾಡಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳ್ಳುತ್ತಿಲ್ಲ. ಈ ಮಧ್ಯೆ ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಮತ್ತೆ ಗಡುವು ನೀಡಲಾಗಿದೆಯಾದರೂ ಪೂರ್ಣಗೊಳ್ಳುವುದು ಅನುಮಾನ.
ಯೋಜನೆ ವೆಚ್ಚ ಎಷ್ಟು?: 337.24 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಯೋಜನೆ ಅನುಷ್ಠಾನಕ್ಕೆ ಅನುದಾನದ ಕೊರತೆ ಏನು ಇಲ್ಲ. ಆದರೆ, ಅಧಿಕಾರಿಗಳು ಮನಸ್ಸು ಮಾಡಿದರೆ ಅನುಷ್ಠಾನ ವಿಳಂಬ ಆಗುವುದಿಲ್ಲ ಎಂದು ಪ್ರಜ್ಞಾವಂತರು ಹೇಳುತ್ತಾರೆ. ಯೋಜನೆ ಅನುಷ್ಠಾನಕ್ಕೆ ಪ್ರಮುಖವಾಗಿ ಅಗತ್ಯವಿರುವ ಜಲ ಶುದ್ಧೀಕರಣ ಘಟಕದ ನಿರ್ಮಾಣ ಕಾಮಗಾರಿ ಶೇ.5 ಮಾತ್ರ ಆಗಿದೆ. ಜಾಕ್ವೆಲ್ ನಿರ್ಮಾಣ ಕಾಮಗಾರಿಯೂ ಕುಂಟುತ್ತ ಸಾಗಿದೆ.
9ರ ಪೈಕಿ 2 ವಲಯ ನೀರು ಸಂಗ್ರಹಾರ ಮಾತ್ರ ಪೂರ್ಣಗೊಂಡಿವೆ. ವಾಟರ್ ಪಂಪಿಂಗ್ ಸ್ಟೇಶನ್‌ಗಳ ನಿರ್ಮಾಣ ಕಾಮಗಾರಿಯೂ ಬಾಕಿ ಇದೆ. ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಶೇ.70 ಆಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಕೆಲವೆಡೆ ಇತರ ಇಲಾಖೆಗಳ ಪರವಾನಗಿ ದೊರೆತಿಲ್ಲ.
ಸ್ಟೇಜ್ 1 ಪ್ರಕ್ರಿಯೆ ಮುಕ್ತಾಯ: ಸವದತ್ತಿ ತಾಲೂಕಿನ ನವೀಲುತೀರ್ಥ ಜಲಾಶಯದ ಬಳಿ ನಿರ್ಮಿಸುತ್ತಿರುವ ಜಾಕ್ವೆಲ್ ನಿರ್ಮಾಣ ಕಾಮಗಾರಿಗೆ ನೀರು ಸಂಗ್ರಹ ತಗ್ಗಿದ ಬಳಿಕ ಜಾಕ್ವೆಲ್ ನಿರ್ಮಿಸುವುದಕ್ಕೆ ಸುಲಭವಾಗುತ್ತದೆ. ನೀರಿನ ಮಧ್ಯೆ ಕಾಮಗಾರಿ ನಡೆಸಲು ಬರುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಇನ್ನು ಸವದತ್ತಿ ತಾಲೂಕಿನ ‘ವಟನಾಳ’ ಬಳಿ ನೀರು ಶುದ್ಧೀಕರಣ ಘಟಕ ನಿರ್ಮಿಸಿಕೊಳ್ಳುವುದಕ್ಕೆ ಅರಣ್ಯ ಇಲಾಖೆಯಿಂದ ಜಾಗ ಹಸ್ತಾಂತರಿಸಿಕೊಳ್ಳುವ ಸ್ಟೇಜ್ 1 ಪ್ರಕ್ರಿಯೆ ಮಾತ್ರ ಮುಗಿದಿದೆ. ಅರಣ್ಯ ಇಲಾಖೆಯಿಂದ ಬೇಗ ಅನುಮತಿ ಸಿಗದ ಕಾರಣ ಕಾಮಗಾರಿ ನಿಗದಿತ ಅವಧಿಯಲ್ಲಿ ಮುಗಿದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಹುಬ್ಬಳ್ಳಿ ಕಂಪನಿಗೆ ಗುತ್ತಿಗೆ: ಹುಬ್ಬಳ್ಳಿಯ ಹರಿಕಾನ್ಸ್ ಇಂಜಿನಿಯರಿಂಗ್ ಕಾಂಟ್ರಾೃಕ್ಟರ್ ಕಂಪನಿಗೆ ಯೋಜನೆ ಅನುಷ್ಠಾನದ ಗುತ್ತಿಗೆ ವಹಿಸಲಾಗಿದೆ. ಕಂಪನಿಯು ಕಾಮಗಾರಿ ಮುಗಿಸಿದ ಮೇಲೆ 5 ವರ್ಷ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದೆ. ಬೆಳಗಾವಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಯೋಜನೆ ಅನುಷ್ಠಾನಗೊಳಿಸುವ ಉಸ್ತುವಾರಿ ವಹಿಸಿಕೊಂಡಿದೆ.
ಕೆಲವು ಕಾಮಗಾರಿಗಳಿಗೆ ಅರಣ್ಯ ಇಲಾಖೆಯಿಂದ ಜಾಗ ಹಸ್ತಾಂತರ ಪ್ರಕ್ರಿಯೆ ನಡೆದಿದ್ದರಿಂದ ಕಾಮಗಾರಿ ವಿಳಂಬವಾಗಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುತ್ತೇವೆ. | ಶಶಿಕಾಂತ ಬಿ. ನಾಯಿಕ, ಕಾರ್ಯನಿರ್ವಾಹಕ ಅಭಿಯಂತ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಳಗಾವಿ