ದಾವಣಗೆರೆ: ಬೆಳೆಗಳಿಗೆ ಉತ್ಪಾದನಾ ವೆಚ್ಚ ಆಧರಿಸಿ ಲಾಭದಾಯಕ ಬೆಲೆ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದಿಂದ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಡಿ.19ರಂದು ರೈತ ಘರ್ಜನ್ ರ‌್ಯಾಲಿ ನಡೆಯಲಿದೆ.
ರಾಜ್ಯದ ವಿವಿಧ ಜಿಲ್ಲೆ, ತಾಲೂಕು ಕೇಂದ್ರಗಳಿಂದ ಸಾವಿರಾರು ರೈತರು ಈ ಆಂದೋಲನದಲ್ಲಿ ಭಾಗವಹಿಸುವರು. ಜಿಲ್ಲೆಯಿಂದ 40 ಜನ ಪ್ರಮುಖರು ಭಾಗವಹಿಸುವರು ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕೆ.ಆರ್.ಧನಂಜಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪೈಪ್, ಹನಿ ನೀರಾವರಿ, ಮಿನಿ ಟ್ರೈಲರ್, ಕಟರ್ ಸೇರಿ ಎಲ್ಲ ಕೃಷಿ ಪರಿಕರಗಳು, ಯಂತ್ರೋಪಕರಣಗಳಿಗೆ ಜಿಎಸ್‌ಟಿ ರದ್ದುಪಡಿಸಬೇಕು. ರೈತರಿಗೆ ನೀಡುತ್ತಿರುವ ಕಿಸಾನ್ ಸಮ್ಮಾನ ನಿಧಿ ಮೊತ್ತವನ್ನು ದ್ವಿಗುಣಗೊಳಿಸಬೇಕು.
ರಾಜ್ಯ ಕಬ್ಬು ಬೆಳೆಗಾರರಿಗೆ ಈಗ ನೀಡುತ್ತಿರುವ ಎಫ್‌ಆರ್‌ಪಿ ದರವನ್ನು ಪರಿಷ್ಕರಿಸಿ, 4 ಸಾವಿರ ರೂ. ನಿಗದಿಗೊಳಿಸಬೇಕು. ಹಾಲಿನ ದರ ದುಬಾರಿಯಾಗಿರುವುದರಿಂದ ಬೆಳೆಗಳಿಗೆ ಬೆಲೆ ಹೆಚ್ಚಿಸಬೇಕು. 2018ರ ಸಾಲಮನ್ನಾ ವ್ಯಾಪ್ತಿಯ ಯೋಜನೆಯನ್ನು ಉಳಿಕೆ ವಂಚಿತ 60 ಸಾವಿರಕ್ಕೂ ಮಿಕ್ಕ ರೈತರಿಗೆ ಜಾರಿ ಮಾಡಬೇಕು.
ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಹಣವನ್ನು ವೈಯಕ್ತಿಕವಾಗಿ ಕಟ್ಟಲು ಅನುಕೂಲವಾಗುವಂತೆ ಆಯಾ ಋತುಮಾನದಲ್ಲೇ ಪರಿಹಾರ ನೀಡಬೇಕು. ರೈತರು ಪಡೆದ ವಸ್ತುಗಳಿಗೆ ಸಬ್ಸಿಡಿ ಹಣವನ್ನು ನೇರವಾಗಿ ಅವರ ಖಾತೆಗೆ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಚಿದಾನಂದ ಕಕ್ಕರಗೊಳ್ಳ, ಹೊನ್ನಾಳಿ ತಾಲೂಕು ಕಾರ್ಯದರ್ಶಿ ಮುರುಗೇಶ್ ಕೂಲಂಬಿ, ಸಹ ಕಾರ್ಯದರ್ಶಿ ಪ್ರಸನ್ನ ಇತರರಿದ್ದರು.