ಜಿಲ್ಲೆ

ದೆಹಲಿ ರೈತ ಹೋರಾಟದ ಹಕ್ಕೋತ್ತಾಯ ಈಡೇರಿಸಿ

ಚಿತ್ರದುರ್ಗ: ದೆಹಲಿಯಲ್ಲಿ ಐತಿಹಾಸಿಕ ರೈತ ಹೋರಾಟವೂ ಮುಂದಿಟ್ಟಿರುವ ಎಲ್ಲ ಹಕ್ಕೋತ್ತಾಯಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಧಿಕ್ಕಾರ ಕೂಗಿದರು. ರೈತರು ಕೃಷಿ ಚಟುವಟಿಕೆಗಾಗಿ ಮಾಡಿರುವ ಎಲ್ಲ ರೀತಿಯ ಸಾಲ ಸಂಪೂರ್ಣ ಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಉಭಯ ಸರ್ಕಾರಕ್ಕೆ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಹಿರಿಯ ರೈತ ನಾಯಕ ಜಗಜಿತ್ ಸಿಂಗ್ ದಲ್ಲೇವಾಲ ಅವರ ಪ್ರಾಣ ಉಳಿಸಲು ಕ್ರಮ ವಹಿಸಬೇಕು. ಕೂಡಲೇ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ನಾಯಕತ್ವ, ದೆಹಲಿ ಗಡಿಗಳಲ್ಲಿ ಹೋರಾಟ ನಿರತರ ಜೊತೆ ಕೇಂದ್ರ ಮಾತುಕತೆ ಆರಂಭಿಸಬೇಕು ಎಂದು ಆಗ್ರಹಿಸಿದರು.

ದಲ್ಲೇವಾಲ ಉಪವಾಸ ಸತ್ಯಾಗ್ರಹ ಆರಂಭಿಸಿ 48ನೇ ದಿನಕ್ಕೆ ಕಾಲಿಟ್ಟಿದೆ. ಅವರು ನಿತ್ರಾಣಗೊಂಡಿದ್ದು, ಮಾಂಸ ಖಂಡಗಳು ಸೊರಗಿವೆ. ದೇಹ ತೂಕ ಕಳೆದುಕೊಂಡಿದ್ದು, ರಕ್ತದೊತ್ತಡ ಕೂಡ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ಯಾವಾಗ ಬೇಕಾದರೂ ಪ್ರಾಣ ಹೋಗುವ ಸನ್ನಿವೇಶ ಉಂಟಾಗಿದೆ. ರೈತ ನಾಯಕರ ಈ ಪರಿಸ್ಥಿತಿಗೆ ಕೇಂದ್ರ ಸರ್ಕಾರವೇ ನೇರ ಕಾರಣ ಎಂದು ಆಕ್ರೋಶ ಹೊರಹಾಕಿದರು.

ರೈತರ ಎಲ್ಲ ಕೃಷಿ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡುವ ಕಾನೂನು ಜಾರಿಗೊಳಿಸಬೇಕು. ವಿದ್ಯುತ್ ಖಾಸಗೀಕರಣ ಮಾಡಬಾರದು. ಈಗಾಗಲೇ ವಿವಿಧೆಡೆ ನಡೆಯುತ್ತಿರುವ ಖಾಸಗೀಕರಣ ಹಾಗೂ ಪಂಪ್ ಸೆಟ್‌ಗಳಿಗೆ ಮೀಟರೀಕರಣದ ಪ್ರಯತ್ನ ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

60 ವರ್ಷ ಮೇಲ್ಪಟ್ಟ ಎಲ್ಲ ಕೃಷಿಕರಿಗೂ ಮಾಸಿಕ 5ಸಾವಿರ ರೂ. ಪಿಂಚಣಿ ನೀಡಬೇಕು. ರೈತ ವಿರೋಧಿ, ಕರಾಳ ಕೃಷಿ ಕಾಯ್ದೆಯ ತದ್ರೂಪವಾಗಿರುವ ಕೃಷಿ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ಧೋರಣೆ ವಾಪಸ್ಸು ಪಡೆಯಬೇಕು ಎಂದು ಕೋರಿದರು.

ಚಿಂತಕ ಜೆ.ಯಾದವರೆಡ್ಡಿ, ರೈತ ಮುಖಂಡರಾದ ಈಚಘಟ್ಟ ಸಿದ್ಧವೀರಪ್ಪ, ಹೊರಕೇರಪ್ಪ, ಹಂಪಯ್ಯನಮಾಳಿಗೆ ಧನಂಜಯ, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಕಮ್ಯುನಿಸ್ಟ್ ಸುರೇಶ್‌ಬಾಬು, ಶಫಿವುಲ್ಲಾ, ಕೆ.ಟಿ.ತಿಪ್ಪೇಸ್ವಾಮಿ, ಚೇತನ್‌ಕುಮಾರ್, ಲಕ್ಷ್ಮೀಕಾಂತ್ ಇತರರಿದ್ದರು.