ಮೈಸೂರು: ದೆವ್ವದ ಜತೆ ಯಾರಾದರೂ ಆಣೆ ಪ್ರಮಾಣಕ್ಕೆ ಹೋಗುತ್ತಾರಾ ? ಎನ್ನುವ ಮೂಲಕ ಮಂಡ್ಯ ಸಂಸದೆ ಸುಮಲತಾ ಅವರಿಗೆ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ತಿರುಗೇಟು ನೀಡಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದೆ ಮಾತು ಕೇಳಿದರೆ ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಿದ ರೀತಿ ಆಗುತ್ತಿದೆ. ಜೆಡಿಎಸ್ ಶಾಸಕರಾದ ನಾವು ದೈವದ ಮೇಲೆ ಅಪಾರ ನಂಬಿಕೆ ಇಟ್ಟಿದ್ದೇವೆ. ಇಂಥವರು ಆಣೆ ಪ್ರಮಾಣಕ್ಕೆ ಕರೆದರೆ ಹೋಗುವುದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದರು.
ರಾಷ್ಟ್ರೀಯ ಹೆದ್ದಾರಿ ವಿಚಾರದಲ್ಲಿ ತಮ್ಮವರನ್ನು ಏಟ್ರಿಯಾ ಹೋಟೆಲ್‌ಗೆ ಏಕೆ ಕಳುಹಿಸಿದರು ಎನ್ನುವುದನ್ನು ಸಂಸದೆ ಮೊದಲು ಹೇಳಲಿ, ಆಗ ಯಾರು ಸತ್ಯವಂತರು ಎನ್ನುವುದು ಗೊತ್ತಾಗುತ್ತದೆ. ಅವರ ಸುತ್ತ ಇರುವವರೆಲ್ಲ ರೈತರ ಹೆಸರಿನಲ್ಲಿ ಕೋಟ್ಯಂತರ ರೂ. ಲೂಟಿ ಮಾಡಿರುವ ಜನ. ನೂರಾರು ಎಕರೆಗೆ ನಕಲಿ ದಾಖಲೆ ಸೃಷ್ಟಿಸಿ ಹಣ ಮಾಡಿದ ದೊಡ್ಡ ಗ್ಯಾಂಗ್ ಸಂಸದರ ಸುತ್ತ ಇದ್ದಾರೆ ಎಂದು ಆಪಾದಿಸಿದರು.
ಇಂತಹವರು ನಮ್ಮ ಜೆಡಿಎಸ್ ಶಾಸಕರ ಬಗ್ಗೆ ಮಾತನಾಡುತ್ತಾರೆ. ಇದರಲ್ಲಿ ಅರ್ಥ ಇದೆಯಾ? ಇಂತಹ ಸಂಸದೆ ಕರೆದರು ಎಂದು ಆಣೆ ಪ್ರಮಾಣಕ್ಕೆ ಹೋಗುವ ಪ್ರಮೇಯ ಬರುವುದಿಲ್ಲ. ಸಂಸದರ ವಿರುದ್ಧ ಜನಾಕ್ರೋಶ ಶುರುವಾಗಿದೆ. ಜನರೇ ಅವರಿಗೆ ಪಾಠ ಕಲಿಸುತ್ತಾರೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಸಂಸದರ ಬೆಂಬಲಿಗರು ಸಾಕಷ್ಟು ಅವ್ಯವಹಾರ ನಡೆಸಿದ್ದಾರೆ. ಸಂಸದರು ಜನಪ್ರತಿನಿಧಿ ಎನ್ನುವುದನ್ನು ಮರೆತು ಬೆದರಿಕೆ ಹಾಕುವ ರೀತಿ ಮಾತನಾಡುತ್ತಿದ್ದಾರೆ. ಇದರಿಂದ ಅವರ ವಿರುದ್ಧ ಪ್ರತಿಭಟನೆ ಸಹ ನಡೆದಿದೆ ಎಂದರು.