ಎನ್.ಆರ್.ಪುರ: ಪಟ್ಟಣ ಜನರ ಬಹಳ ವರ್ಷಗಳ ಬೇಡಿಕೆಯಂತೆ ಮಾರಿಕಾಂಬಾ ದೇವಿಮೂರ್ತಿ ಕೆತ್ತನೆ ಮಾಡಲು ಅನುಕೂಲವಾಗುವಂತೆ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಮಾರಿಕಾಂಬಾ ದೃಷ್ಟಿಕಲ್ಲು ಸಮುದಾಯ ಭವನ ನಿರ್ಮಿಸಿಕೊಟ್ಟಿದ್ದೇವೆ ಎಂದು ಶಾಸಕ ಟಿ.ಟಿ.ರಾಜೇಗೌಡ ತಿಳಿಸಿದರು.
ಸುಂಕದಕಟ್ಟೆಯಲ್ಲಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ದೃಷ್ಟಿಕಲ್ಲು ಮಾರಿಕಾಂಬಾ ಸಮದಾಯ ಭವನ ಉದ್ಘಾಟಿಸಿ ಮಾತನಾಡಿ, ನಾನು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷನಾಗಿದ್ದಾಗ ಇದೇ ಸಮುದಾಯ ಭವನಕ್ಕೆ 20 ಲಕ್ಷ ರೂಪಾಯಿ ಮೀಸಲು ಇಟ್ಟಿದ್ದೆ. ಕಾರಣಾಂತರದಿಂದ ಆ ಹಣ ಬರಲಿಲ್ಲ. ಮತ್ತೆ ನಾನು ಶಾಸಕನಾಗಿ ಸಮುದಾಯ ಭವನವನ್ನು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಿಸಿಕೊಟ್ಟಿದ್ದೇನೆ. ಸಮುದಾಯ ಭವನ ಎನ್.ಆರ್.ಪುರದ ಐತಿಹಾಸಿಕ ಮಾರಿ ಜಾತ್ರೆಗೆ ಉಪಯೋಗವಾಗಲಿದೆ. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ಶ್ರೀನಿವಾಸ್ ಎನ್.ಆರ್.ಪುರದ ಹುಟ್ಟೂರಿನ ಋಣ ತೀರಿಸಲು ಎಲ್ಲ ಧರ್ಮದವರ ಸಮುದಾಯ ಭವನ, ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳನ್ನು ಕಟ್ಟಲು ಸಹಾಯ ಮಾಡಿದ್ದಾರೆ. ಎನ್.ಆರ್.ಪುರ ಸಹಬಾಳ್ವೆಗೆ ಹೆಸರಾಗಿದೆ ಎಂದರು.
ಮಾರಿಕಾಂಬಾ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ ಮಾತನಾಡಿ, ಈ ಹಿಂದೆ ಮಾರಿ ಜಾತ್ರೆಯಲ್ಲಿ ಹಲಸಿನ ಮರದ ಕೆಳಗೆ ಮಾರಿಕಾಂಬಾ ದೇವಿಯ ಗೊಂಬೆಯನ್ನು ಕೆತ್ತನೆ ಮಾಡಲಾಗುತ್ತಿತ್ತು. ಈಗ ಸಮುದಾಯ ಭವನ, ಕಾಂಪೌಂಡ್ ಸಹ ಆಗಿದೆ. ಮಾರಿಕಾಂಬಾ ಜಾತ್ರೆಗೆ ಪ್ರತಿಯೊಬ್ಬರೂ ಶ್ರಮಿಸುತ್ತಿದ್ದಾರೆ. ಎಲ್ಲರೂ ಒಟ್ಟಾಗಿ ನಾಡ ಹಬ್ಬದಂತೆ ಮಾರಿಕಾಂಬೆ ಜಾತ್ರೆ ನಡೆಯುತ್ತಿದ್ದು, ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಮಾರಿಕಾಂಬಾ ಗೊಂಬೆ ಕೆತ್ತನೆ ಮಾಡಿದ ಮೈಲಾರ ಆಚಾರ್, ಶಾಸಕ ಟಿ.ಡಿ.ರಾಜೇಗೌಡ, ಎಂ.ಶ್ರೀನಿವಾಸ್, ಪಿ.ಆರ್.ಸದಾಶಿವ
ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನು ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಸದಸ್ಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ರಾಗಮಯೂರಿ ಅಕಾಡೆಮಿ ಮಕ್ಕಳಿಂದ ನತ್ಯ, ಭರತ ನಾಟ್ಯ ನಡೆಯಿತು.
ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್, ಪಪಂ ಅಧ್ಯಕ್ಷೆ ಜುಬೇದಾ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ, ಉಪಾಧ್ಯಕ್ಷೆ ಉಮಾಕೇಶವ, ಸದಸ್ಯರಾದ ಮುಕುಂದ, ಸೋಜ, ವಿಶ್ವ ಕರ್ಮ ಸೇವಾ ಸಮಾಜದ ಶಂಗೇರಿ ಕ್ಷೇತ್ರ ಅಧ್ಯಕ್ಷ ಕಷ್ಣಯ್ಯ ಆಚಾರ್, ಅಂಬೇಡ್ಕರ್ ನಗರದ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಎನ್.ಪಿ.ರಾಮಯ್ಯ ಇದ್ದರು.