ಜಿಲ್ಲೆ

ದುಸ್ವಪ್ನವಾಗಿ ಕಾಡುತ್ತಿರುವ ಕರೊನಾ

ಸುಭಾಸ ಹೆಗಡೆ ಧೂಪದಹೊಂಡ

ಕಾರವಾರ: ಜಿಲ್ಲೆಯ 76 ಜನರಿಗೆ ಶುಕ್ರವಾರ ಕರೊನಾ ಸೋಂಕು ಇರುವುದು ಖಚಿತವಾಗಿದೆ. ಸೋಂಕಿನ ಮೂಲ ಪತ್ತೆಯಾಗದೇ ಇರುವ ಪ್ರಕರಣಗಳೇ ಹೆಚ್ಚಿವೆ. ಇದರಿಂದಾಗಿ ಈಗ ಜಿಲ್ಲೆಯ ಜನರಿಗೆ ಕರೊನಾ ಎಂಬುದು ದುಸ್ವಪ್ನವಾಗಿ ಕಾಡುತ್ತಿದೆ.

ಕಾರವಾರದಲ್ಲಿ 5, ಅಂಕೋಲಾ- 4, ಕುಮಟಾ-22, ಹೊನ್ನಾವರ-19, ಭಟ್ಕಳ-9, ಹಳಿಯಾಳ-6, ಮುಂಡಗೋಡ -4, ಶಿರಸಿ - 5, ಸಿದ್ದಾಪುರ, ಯಲ್ಲಾಪುರದಲ್ಲಿ ತಲಾ 1 ಪ್ರಕರಣಗಳು ಪತ್ತೆಯಾಗಿವೆ. 44 ಜನರ ಸೋಂಕಿನ ಮೂಲ ಪತ್ತೆಯಾಗಿಲ್ಲ. 10 ಜನರಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಬಂದಿದೆ. 13 ಜನರು ದೇಶದ ಒಳಗೆ ಪ್ರಯಾಣ ಮಾಡಿದವರಿಗೆ, ಸಿದ್ದಾಪುರ ಹಾಗೂ ಹೊನ್ನಾವರದಲ್ಲಿ ಹೊರ ದೇಶದಿಂದ ವಾಪಸಾದ ತಲಾ ಒಬ್ಬರಿಗೆ ರೋಗ ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರಲ್ಲಿ ಐವರು ವೃದ್ಧರು ನಾಲ್ವರು ಮಕ್ಕಳಿದ್ದಾರೆ.

ಶಿರಸಿಯಲ್ಲಿ ದೇವಸ್ಥಾನದ ಸೋಂಕಿತ ಸಿಬ್ಬಂದಿಯ ಕುಟುಂಬದ ಐವರಿಗೆ, ಕಾರವಾರ ನಗರದ ನಾಲ್ವರು ಪುರುಷರಿಗೆ, ಹಳಿಯಾಳ ಸಾತನಳ್ಳಿ ಗ್ರಾಮಕ್ಕೆ ಗೋವಾದಿಂದ ಆಗಮಿಸಿದ ಯುವಕ ಹಾಗೂ 11 ವರ್ಷದ ಬಾಲಕನಿಗೆ, ದಾಂಡೇಲಿಯಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದೆ.

ಕುಮಟಾದಲ್ಲಿ ಖಾಸಗಿ ವೈದ್ಯರೊಬ್ಬರಿಗೆ ಸೋಂಕು ತಗುಲಿದೆ. ಗೋಕರ್ಣದಲ್ಲಿ ಇಬ್ಬರಿಗೆ, ಹಾಗೂ ಕುಮಟಾ ಪಟ್ಟಣ ಹಾಗೂ ಸುತ್ತಲಿನ ಊರುಗಳಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರಲ್ಲಿ ರೋಗ ಪತ್ತೆಯಾಗಿದೆ. ಬಾಡ, ಗುಡೆ ಅಂಗಡಿ, ಮೂರೂರು ರಸ್ತೆ, ಮಣ್ಕಿ, ಕೋಡ್ಕಣಿ, ಶಶಿಹಿತ್ಲು, ಗುಂದ, ಹಂದಿಗೋಣ, ನೆಹರುನಗರ, ಧಾರೇಶ್ವರದವರಿಗೆ ರೋಗ ಕಾಣಿಸಿಕೊಂಡಿದೆ. ಸೋಂಕಿತರಲ್ಲಿ ನಾಲ್ವರು ವೃದ್ಧರಿದ್ದಾರೆ. ಹೊನ್ನಾವರದಲ್ಲಿ ಚಂದಾವರ ಕಡ್ಲೆ, ಹೊದ್ಕೆಶಿರೂರು, ಹಳದೀಪುರ, ಹಡಿನಬಾಳ, ಅಳ್ಳಂಕಿ, ಅನಿಲಗೋಡ, ಪಟ್ಟಣದ ಬಂದರು ರಸ್ತೆ ಪ್ರಭಾತ ನಗರ ಭಾಗದಲ್ಲಿ 19 ಜನರಿಗೆ ಸೋಂಕು ಖಚಿತವಾಗಿದೆ.

ಮುಂಡಗೋಡ ಪಟ್ಟಣದ ಇಬ್ಬರು ಮಹಿಳೆಯರಿಗೆ ಕುಟುಂಬದವರ ಪ್ರಾಥಮಿಕ ಸಂಪರ್ಕದಿಂದ, ಸೋಂಕು ಕಾಣಿಸಿಕೊಂಡಿದೆ. ಹೊಸ ಓಣಿಯ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರ 12 ವರ್ಷದ ಪುತ್ರನಿಗೆ. ಹುಬ್ಬಳ್ಳಿಯಿಂದ ಬಂದ ಕಾವಲಕೊಪ್ಪದ ವ್ಯಕ್ತಿಗೆ ಕರೊನಾ ಸೋಂಕು ದೃಢಪಟ್ಟಿದೆ. ಬೆಂಗಳೂರಿನಿಂದ ಬಂದ ಗಾಂಧಿ ನಗರದ 34 ವರ್ಷದ ವ್ಯಕ್ತಿಗೆ ಪಾಸಿಟಿವ್ ಬಂದಿದೆ. ಆದರೆ, ಆತ ಗಂಟಲ ದ್ರವ ಪರೀಕ್ಷೆಗೆ ನೀಡಿ ಬೆಂಗಳೂರಿಗೆ ವಾಪಸಾಗಿದ್ದಾನೆ ಎನ್ನಲಾಗಿದೆ.

ಭಟ್ಕಳ ಗ್ರಾಮೀಣ ಠಾಣೆ ಸೀಲ್ ಡೌನ್: ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ರೈಟರ್ ಒಬ್ಬರಿಗೆ ಕರೊನಾ ಸೋಂಕು ಕಾಣಿಸಿಕೊಂಡಿದೆ. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಗಂಟಲ ದ್ರವ ತಪಾಸಣೆ ಮಾಡಿದಾಗ ರೋಗ ಪತ್ತೆಯಾಗಿದೆ. ಇದರಿಂದ ಠಾಣೆಯನ್ನು ಸೀಲ್​ಡೌನ್ ಮಾಡಲಾಗಿದೆ. ಭಟ್ಕಳದಲ್ಲಿ ಒಟ್ಟು 9 ಪ್ರಕರಣಗಳು ಪತ್ತೆಯಾಗಿವೆ.

ಎಲ್ಲೆಡೆ ಕೋವಿಡ್ ಕೇರ್ ಸೆಂಟರ್: ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ರೋಗ ಲಕ್ಷಣ ಇಲ್ಲದ ಎಲ್ಲ ಸೋಂಕಿತರನ್ನು ಕರೊನಾ ಕೇರ್ ಸೆಂಟರ್​ನಲ್ಲಿ ಇರಿಸಲಾಗುತ್ತದೆ. ಕಾರವಾರ ಕ್ರಿಮ್್ಸ ಆಸ್ಪತ್ರೆಯಲ್ಲಿದ್ದವರನ್ನೂ ಈಗಾಗಲೇ ಕೇರ್ ಸೆಂಟರ್​ಗೆ ಸ್ಥಳಾಂತರಿಸಲಾಗಿದೆ. ರೋಗ ಲಕ್ಷಣವಿರುವವರು, ಬೇರೆ ರೋಗದಿಂದ ಬಳಲುತ್ತಿರುವವನ್ನು ಮಾತ್ರ ಆಸ್ಪತ್ರೆಗೆ ಸೇರಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.