ಜಿಲ್ಲೆ

ದುಸ್ಥಿತಿಯಲ್ಲಿ ಲಂಡಕೇನ್ ಹಳ್ಳ

ನರೇಗಲ್ಲ: ಸಮೀಪದ ಅಬ್ಬಿಗೇರಿ-ಯರೇಬೇಲೇರಿ ಮಾರ್ಗಮಧ್ಯದ ಲಂಡಕೇನ್ ಹಳ್ಳದ ಪರ್ಶಿ ಕಿತ್ತು ಹೋಗಿದೆ. ಸೇತುವೆ ಇಲ್ಲದ ಕಾರಣ ಮಳೆಗಾಲದಲ್ಲಿ ಹಳ್ಳ ತುಂಬಿ ಹರಿದರೆ ಸಂಚಾರ ಸಂಪೂರ್ಣ ಸ್ಥಗಿತವಾಗುತ್ತದೆ. ಅಲ್ಲದೆ, ಅಬ್ಬಿಗೇರಿ ಗ್ರಾಮದ ಚರಂಡಿ ನೀರು ಹಳ್ಳದಲ್ಲೇ ಹರಿದು ಹೋಗುತ್ತಿರುವುದರಿಂದ ವಾಹನ ಸವಾರರು ಮೂಗು ಮುಚ್ಚಿಕೊಂಡು ತೆರಳುವ ಸ್ಥಿತಿ ಇದೆ.
ಅಬ್ಬಿಗೇರಿ, ಯರೇಬೇಲೇರಿ, ಕುರುಡಗಿ, ಗುಜಮಾಗಡಿ, ಕಿರಿಟಗೇರಿ, ಹುಯಿಲಗೋಳ ಮೊದಲಾದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದೆ. ಈ ಮಾರ್ಗದಲ್ಲಿನ ಲಂಡಕೇನ್ ಹಳ್ಳದಲ್ಲಿ ಸಂಚಾರಕ್ಕಾಗಿ ನೂರಾರು ವರ್ಷಗಳ ಹಿಂದೆ ನಿರ್ವಿುಸಿದ ಪರಸಿ ಕಿತ್ತು ಹೋಗಿದೆ. ತ್ಯಾಜ್ಯ ನೀರು ಹಳ್ಳದ ಪರ್ಶಿ ಮೇಲೆಯೇ ಹರಿಯುತ್ತಿತ್ತು. ಕೆಲವು ವರ್ಷಗಳ ಹಿಂದೆ ಪರ್ಶಿ ಕಿತ್ತು ಹೋಗಿದ್ದರಿಂದ ಎರಡು ಸಣ್ಣ ಪೈಪ್​ಗಳನ್ನು ಹಾಕಿ ಪರ್ಶಿ ನಿರ್ವಿುಸಲಾಗಿತ್ತು. ದಿನನಿತ್ಯದ ತ್ಯಾಜ್ಯದ ನೀರು ಪೈಪುಗಳ ಮೂಲಕ ಹರಿದುಹೋಗಬೇಕು. ಮಳೆಗಾಲದಲ್ಲಿ ಮಳೆ ನೀರು ಪರ್ಶಿ ಮೇಲಿಂದ ಹರಿಯಲಿ ಎನ್ನುವ ಕಾರಣ್ಕಕಾಗಿ ಪೈಪ್ ಜೋಡಿಸಲಾಗಿತ್ತು. ಆದರೀಗ ಪೈಪ್​ಗಳಲ್ಲಿ ಹೂಳು ತುಂಬಿದ್ದರಿಂದ ತ್ಯಾಜ್ಯ, ಮಳೆ ನೀರು ಪರ್ಶಿ ಮೇಲೆಯೇ ಹರಿಯುತ್ತದೆ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಅಬ್ಬಿಗೇರಿ ಗ್ರಾಮವು ರೋಣ ವಿಧಾನಸಭೆ ಕ್ಷೇತ್ರಕ್ಕೆ ಸೇರಿದರೆ ಯರೇಬೇಲೇರಿ ಗ್ರಾಮ ನರಗುಂದ ವಿಧಾನಸಭೆ ಕ್ಷೇತ್ರಕ್ಕೆ ಸೇರಿದೆ. ಹೀಗಾಗಿ, ಲಂಡಕೇನ್ ಹಳ್ಳದ ಸಮಸ್ಯೆಗೆ ಪರಿಹಾರ ಸಿಗದೆ ಸಾರ್ವಜನಿಕರು ಸುಗಮ ಸಂಚಾರಕ್ಕೆ ಪರದಾಡುವಂತಾಗಿದೆ.
ಹಳ್ಳಕ್ಕೆ ಸೇತುವೆ ನಿರ್ವಿುಸುವಂತೆ ದಶಕಗಳಿಂದ ಒತ್ತಾಯಿಸಲಾಗುತ್ತಿದೆ. ಆದರೆ, ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಈ ಮಾರ್ಗವಾಗಿ ಹೊಲಗಳಿಗೆ ಹೋಗಲು ತೊಂದರೆಯಾಗಿದೆ. ಇಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಈಗಲಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಹಳ್ಳಕ್ಕೆ ಸೇತುವೆ ನಿರ್ವಿುಸಲು ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಅಬ್ಬಿಗೇರಿ ಗ್ರಾಮಸ್ಥರಾದ ಬಸವರಾಜ ಪಲ್ಲೇದ, ಐ.ಬಿ. ಒಂಟೇಲಿ, ಗುರಣ್ಣ ಅವರಡ್ಡಿ ಇತರರು ಒತ್ತಾಯಿಸಿದ್ದಾರೆ.

ಅಬ್ಬಿಗೇರಿ ಗ್ರಾಮದ ಹತ್ತಿರದ ಲಂಡಕೇನ್ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದಾರೆ. ಮಳೆಗಾಲದಲ್ಲಿ ಆ ಹಳ್ಳ ತುಂಬಿ ಹರಿಯುವುದರಿಂದ ಸಂಚಾರಕ್ಕೆ ಸಂಚಕಾರ ಉಂಟಾಗುತ್ತದೆ. ಇನ್ನೆರಡು ತಿಂಗಳಲ್ಲಿ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಈರಪ್ಪ ಹೊಸೂರ ಎಇಇ, ಲೋಕೋಪಯೋಗಿ ಇಲಾಖೆ, ರೋಣ